ಸಾಗರ: ವಿಶ್ವಕರ್ಮ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ಅರ್ಹ ಫಲಾನುಭವಿಗಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ ಎಂದು ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಸತೀಶ್ ಅಂಗಡಿ ಆರೋಪಿಸಿದರು.
ಕೇಂದ್ರ ಸರ್ಕಾರ ಒಂದು ವರ್ಷದ ಹಿಂದೆ ವಿಶ್ವಕರ್ಮ ಯೋಜನೆಯನ್ನು ಚುನಾವಣೆ ಮುನ್ನ ಘೋಷಿಸಿತ್ತು. ಆದರೆ ಯೋಜನೆ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳೇ ಇಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಯೋಜನೆ ವ್ಯಾಪ್ತಿಯಲ್ಲಿ ಟೈಲರ್, ಬಡಗಿ ಮತ್ತು ಮೇಸ್ತ್ರಿಗಳನ್ನು ಪರಿಗಣಿಸಿಲ್ಲ. ನಿಜವಾಗಿಯೂ ಈ ವರ್ಗಗಗಳಿಗೆ ಯೋಜನೆ ತೀರ ಅಗತ್ಯ. ಈ ಕಸುಬು ಮಾಡುತ್ತಿರುವವರು ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ನಿಮ್ಮ ಅರ್ಜಿ ತಿರಸ್ಕೃತಗೊಂಡಿದೆ. ನಿಮ್ಮ ಉದ್ಯೋಗ ಬದಲಾಯಿಸಿ ಅರ್ಜಿ ಸಲ್ಲಿಸಿ ಎಂದು ಉತ್ತರ ನೀಡುತ್ತಾರೆ. ಆದರೆ ಯೋಜನೆಗಾಗಿ ತಮ್ಮ ಮೂಲವೃತ್ತಿ ಬದಲಾಯಿಸಿಕೊಳ್ಳುವುದು ಹೇಗೆ? ನಕಲಿ ದಾಖಲೆ ಸೃಷ್ಟಿಸಿಕೊಂಡು ಫಲಾನುಭವಿಗಳಿಗೆ ಬಂದ ಹಣವನ್ನು ಲಪಟಾಯಿಸುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಕೆಲವು ಬ್ಯಾಂಕ್‌ಗಳಲ್ಲಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿದವರನ್ನು ಸತಾಯಿಸಲಾಗುತ್ತಿದೆ. ಅದರಲ್ಲಿಯೂ ಕೆಲವು ಬ್ಯಾಂಕ್‌ಗಳಲ್ಲಿ ಹೊರರಾಜ್ಯದಿಂದ ಬಂದ ಅಧಿಕಾರಿಗಳಿದ್ದು ಕನ್ನಡ ಭಾಷೆ ಬರುತ್ತಿಲ್ಲ. ಹಿಂದಿ, ಇಂಗ್ಲಿಷ್, ತಮಿಳು, ತೆಲುಗು ಮಾತನಾಡುತ್ತಾರೆ. ಇವರ ಭಾಷೆ ಕಾರ್ಮಿಕರಿಗೆ ಅರ್ಥವಾಗುತ್ತಿಲ್ಲ. ಇದರಿಂದ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಕೆಲವು ಬ್ಯಾಂಕ್‌ಗಳಲ್ಲಿ ಬಾಂಡ್ ತರಲು ಹೇಳುತ್ತಿದ್ದಾರೆ. ತಕ್ಷಣ ಸಂಸದರು, ಶಾಸಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಅಣ್ಣಪ್ಪ ಮೇಸ್ತ್ರಿ ಮಾತನಾಡಿ, ಸಾಗರದಲ್ಲಿ ಕಾರ್ಮಿಕರಿಗೆ ವಿತರಿಸಲು ಕಾರ್ಮಿಕ ಕಿಟ್‌ಗಳು ಬಂದಿವೆ. ಆದರೆ ಶಾಸಕರು ಡೇಟ್ ಕೊಡುತ್ತಿಲ್ಲ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಸದ್ಯದಲ್ಲೇ ಮಳೆಗಾಲ ಪ್ರಾರಂಭವಾಗುತ್ತದೆ. ಅಷ್ಟರೊಳಗೆ ಕಿಟ್ ಕೊಟ್ಟರೆ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಕಾರ್ಮಿಕರಿಗೆ ಕಿಟ್ ಕೊಡಿ ಎಂದು ಹಲವು ಬಾರಿ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.
ಸಂಘದ ತಾಲೂಕು ಅಧ್ಯಕ್ಷ ರಾಮಚಂದ್ರ ಮೇಸ್ತ್ರಿ, ಉಮೇಶ್, ಶಂಕರಪ್ಪ, ಕೃಷ್ಣಮೂರ್ತಿ ಹಾಜರಿದ್ದರು.