ನ್ಯೂಸ್

ಗಣತಿಯಲ್ಲಿ ಕುಂಚಿಟಿಗ ಸಮುದಾಯಕ್ಕೆ ಅನ್ಯಾಯ

ಶಿವಮೊಗ್ಗ: ಜಾತಿ ಜನಗಣತಿ ವರದಿಯಲ್ಲಿ ಕುಂಚಿಟಿಗರ ಸಂಖ್ಯೆಯನ್ನು ಕಡಿಮೆ ನಮೂದಿಸಲಾಗಿದೆ. ಹೀಗಾಗಿ ಮತ್ತೊಮ್ಮೆ ಗಣತಿ ಮಾಡಬೇಕು ಎಂದು ಕುಂಚಿಟಿಗರ ಮಹಾಮಂಡಲದ ಅಧ್ಯಕ್ಷ ಎಚ್.ರಂಗಹನುಮಯ್ಯ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿರುವ ಜಾತಿ ಜನಗಣತಿ ವರದಿಯಲ್ಲಿ ಕುಂಚಿಟಿಗ ಸಮುದಾಯಕ್ಕೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಆಯೋಗದಿಂದ ಮತ್ತೊಮ್ಮೆ ಗಣತಿ ಮಾಡಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಬೇಕೆಂದು ಆಗ್ರಹಿಸಿದರು.

ಕಾಂತರಾಜ್ ಆಯೋಗದ ವರದಿಯಲ್ಲಿ ಪ್ರವರ್ಗ-3ಎನಲ್ಲಿ ಕುಂಚಿಟಿಗ ಒಕ್ಕಲಿಗರು ಸೇರಿ 2.36 ಲಕ್ಷ ಎಂದು ಹೇಳಲಾಗಿದೆ. ಆದರೆ ಇದು ಸರಿಯಲ್ಲ. ರಾಜ್ಯದಲ್ಲಿ ನಮ್ಮ ಜನಸಂಖ್ಯೆ 30 ಲಕ್ಷಕ್ಕೂ ಹೆಚ್ಚಿದೆ. ಜಿಲ್ಲೆಯಲ್ಲಿ ಸುಮಾರು 50 ಸಾವಿರ, ಬೆಂಗಳೂರು ಜಿಲ್ಲೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ರಾಜ್ಯದ ಸುಮಾರು 19 ಜಿಲ್ಲೆಗಳಲ್ಲಿ ನಮ್ಮ ಸಮುದಾಯದವರು ಇದ್ದಾರೆ ಎಂದು ತಿಳಿಸಿದರು.

ಮಹಾಮಂಡಲದ ಜಿಲ್ಲಾಧ್ಯಕ್ಷ ಕಾಂತರಾಜ್ ಸೋಮಿನಕೊಪ್ಪ ಮಾತನಾಡಿ, ಕುಂಚಿಟಿಗರು, ಕುಂಚಒಕ್ಕಲು, ಗೌಂಡರ್, ನಾಮಧಾರಿ, ಕಾಮಾಟಿ, ಲಿಂಗಾಯಿತ ಕುಂಚಿಟಿಗ, ಒಕ್ಕಲಿಗ ಕುಂಚಿಟಿಗ ಇವೆಲ್ಲವೂ ಕುಂಚಿಟಿಗ ಜಾತಿಗೆ ಸೇರುತ್ತವೆ. ಇದನ್ನು ಮನಗಂಡು ಕಾಂತರಾಜ್ ಜನಗಣತಿ ವರದಿಯಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯ ಆಗಿರುವುದನ್ನು ಸರಿಪಡಿಸಲು ನಮಗೆ ಪ್ರತ್ಯೇಕ ನಿಗಮ ಸ್ಥಾಪಿಸಿ, ಮರು ಜನಗಣತಿ ಮಾಡುವ ಮೂಲಕ ನಮಗೆ ನ್ಯಾಯ ಒದಗಿಸಬೇಕು. ಜನಗಣತಿ ಮಾಡುವಾಗ ಆಧಾರ್ ಕಾರ್ಡ್ ಲಿಂಕ್ ಮಾಡಬೇಕೆಂದು ಹೇಳಿದರು.

ಮಹಾಮಂಡಲದ ರಾಜ್ಯ ಕಾರ್ಯದರ್ಶಿ ಎಂ.ರಂಗರಾಜು, ಖಜಾಂಚಿ ವೆಂಕಟೇಶ್ ಆರ್. ಸವಣೂರ, ಪ್ರಮುಖರಾದ ಎಸ್.ಎಲ್.ಗೋವಿಂದರಾಜ್, ಆಂಜನಪ್ಪ, ಲೋಹಿತ್, ರಾಘವೇಂದ್ರ, ಹಾಲೇಶ್, ಕೃಷ್ಣಮೂರ್ತಿ ಇತರರಿದ್ದರು.