ನ್ಯೂಸ್

ಜಾತಿ ಜನಗಣತಿಯಲ್ಲಿ ಈಡಿಗ ಸಮಾಜಕ್ಕೆ ಅನ್ಯಾಯ

ಶಿವಮೊಗ್ಗ: ಜಾತಿ ಜನಗಣತಿ ವರದಿ ಅವೈಜ್ಞಾನಿಕ ಎಂದು ನಾವೇನೂ ಹೇಳುವುದಿಲ್ಲ. ಆದರೆ ಕಾಂತರಾಜ ವರದಿಯಲ್ಲಿ ಈಡಿಗ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಸಮುದಾಯದ ಮುಖಂಡ ಡಾ. ಜ್ಞಾನೇಶ್ ಆರೋಪಿಸಿದರು.

ವರದಿಯಲ್ಲಿ ಈಡಿಗ ಸಮುದಾಯದ ಅಂಕಿ ಅಂಶಗಳು ಸಂಪೂರ್ಣ ಸುಳ್ಳು. ಈ ಮೂಲಕ ಹಿಂದುಳಿದ ವರ್ಗದ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಗಣತಿ ಸರಿಯಾದ ಕ್ರಮದಲ್ಲಿ ನಡೆಸಿ ಹಿಂದುಳಿದ ವರ್ಗದವರಿಗೆ ಮೀಸಲಾತಿ ಕಲ್ಪಿಸಬೇಕು. ಆದರೆ ಪ್ರಸ್ತುತ ಸಮುದಾಯಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿರುವ ವರದಿ ಸರಿಯಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈಡಿಗ ಸಮಾಜ ಪ್ರಬಲ ಸಮುದಾಯ. ಸೊರಬ ಕ್ಷೇತ್ರದಿಂದ ಬೆಂಗಳೂರಿಗೆ ಗುಳೆ ಹೋದ ದೀವರ ಸಂಖ್ಯೆಯೇ 50 ಸಾವಿರ ಗಡಿ ದಾಟಿದೆ. ಉಳಿದ ತಾಲೂಕುಗಳಲ್ಲಿ ಸಂಖ್ಯೆ ಎಷ್ಟಿರಬಹುದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜಿಲ್ಲೆಯಲ್ಲೇ 7ರಿಂದ 8 ಲಕ್ಷ ಸಮುದಾಯದ ಜನರಿದ್ದಾರೆ. ಆದ್ದರಿಂದ ಸಮೀಕ್ಷಾ ವರದಿಯಿಂದ ಸಮುದಾಯಕ್ಕೆ ಅವಮಾನವಾಗಿದೆ ಎಂದರು.

ಜಾತಿ ಜನಗಣತಿ ಅಂಕಿಅಂಶದಲ್ಲಿ ತಾರತಮ್ಯ ಸಲ್ಲದು. ಸಮುದಾಯದಲ್ಲಿ ಪ್ರಜ್ಞಾವಂತರಿದ್ದಾರೆ. ಸಮುದಾಯದ ಸ್ವಾಮೀಜಿಗಳು ಮತ್ತು ಪ್ರಮುಖರೊಂದಿಗೆ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಹೋರಾಟದ ಹಾದಿ ಕಂಡುಕೊಳ್ಳಲು ಸರ್ಕಾರ ಅವಕಾಶ ಮಾಡಿಕೊಡುವುದು ಬೇಡ ಎಂದು ಎಚ್ಚರಿಸಿದರು.

ಈಡಿಗ ಸಮುದಾಯದ ಮುಖಂಡ ಸುರೇಶ್ ಕೆ. ಬಾಳೆಗುಂಡಿ ಮಾತನಾಡಿ, ಸರ್ಕಾರ ಹಿಂದುಳಿದ ವರ್ಗಗಳಿಗೆ ಮೀಸಲು ಹೆಚ್ಚು ಮಾಡುವ ಇಚ್ಛೆ ಹೊಂದಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಬಲಾಢ್ಯ ಸಮುದಾಯದ ಬಗ್ಗೆ ತಪ್ಪು ಲೆಕ್ಕ ನೀಡಿರುವುದನ್ನು ಖಂಡಿಸುತ್ತೇವೆ. ಈ ವರದಿ ತಿರಸ್ಕರಿಸಿ ಕರಾರುವಕ್ಕಾದ ಸಮೀಕ್ಷೆ ಮಾಡಬೇಕು ಎಂದು ಆಗ್ರಹಿಸಿದರು. ಬ್ರಹ್ಮಶ್ರೀ ನಾರಾಯಣಗುರು ಈಡಿಗ ಮಹಿಳಾ ಸಂಘದ ಜಿಲ್ಲಾ ಘಟಕ ಅಧ್ಯಕ್ಷೆ ಪುಷ್ಪಲತಾ ಮೂರ್ತಿ, ಜಾನಕಪ್ಪ, ಷಡಕ್ಷರಿ, ಗುರುಮೂರ್ತಿ ಸುದ್ದಿಗೋಷ್ಠಿಯಲ್ಲಿದ್ದರು.

ಉಪ ಪಂಗಡಗಳ ಹೆಸರೇ ಇಲ್ಲ

ರಾಜ್ಯದಲ್ಲಿ 12,31,490 ಮಂದಿ ಈಡಿಗರಿದ್ದಾರೆಂದು ವರದಿಯಲ್ಲಿ ಹೇಳಲಾಗುತ್ತಿದೆ. ಅದರಲ್ಲಿ ಈಡಿಗ 3,50,603, ಬಿಲ್ಲವ 4,85,628, ಪೂಜಾರಿ 1,01,881, ದೀವರು 63,559, ನಾಮದಾರಿ 2,16,619 ಸೇರಿ 5 ಉಪಪಂಗಡಗಳ ಜನಸಂಖ್ಯೆಯ ಅಂಕಿಅಂಶ ಮಾತ್ರ ವರದಿಯಲ್ಲಿ ನೀಡಲಾಗಿದೆ. ಒಟ್ಟು 26 ಉಪಪಂಗಡಗಳಲ್ಲಿ ಉಳಿದ 21 ಜಾತಿಗಳ ಹೆಸರನ್ನೇ ಪ್ರಸ್ತಾಪಿಸಿಲ್ಲ ಎಂದು ಜ್ಞಾನೇಶ್ ದೂರಿದರು. ಕುರುಬ ಸಮಾಜದಲ್ಲಿ 63 ಲಕ್ಷ ಜನಸಂಖ್ಯೆ ಇದೆ ಎಂದು ಜಾತಿಗಣತಿ ಸಮೀಕ್ಷೆ ವರದಿ ಹೇಳುತ್ತಿದೆ. ಅದು ಸುಳ್ಳೆಂದು ಹೇಳುತ್ತಿಲ್ಲ. ಆದರೆ ಕುರುಬ ಸಮುದಾಯಕ್ಕೆ ಸರಿಸಮನಾಗಿರುವ ಈಡಿಗ ಸಮಾಜವನ್ನು ಛಿದ್ರಗೊಳಿಸುವ ಮೂಲಕ ಸಾಮಾಜಿಕ ವ್ಯವಸ್ಥೆಯಲ್ಲಿ ಸಮುದಾಯದ ಅಸ್ತಿತ್ವವನ್ನು ಕೊಲ್ಲುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.