ನ್ಯೂಸ್

ನಬಾರ್ಡ್ ನೆರವು ಕಡಿತದಿಂದ ರಾಜ್ಯಕ್ಕೆ ಅನ್ಯಾಯ: ಸಚಿವ ಕೆ.ಎನ್.ರಾಜಣ್ಣ ಆರೋಪ

ಬೆಂಗಳೂರು: ಅಲ್ಪಾವಧಿ ಕೃಷಿ ಸಾಲದ ಪುನರ್ಧನ ಮಿತಿಯನ್ನು ನಬಾರ್ಡ್ ಹಠಾತ್ತನೆ ಭಾರಿ ಪ್ರಮಾಣದಲ್ಲಿ ಇಳಿಸಿ, ರಾಜ್ಯಕ್ಕೆ ಅನ್ಯಾಯ ಮಾಡಿದೆ. ಅವಲಂಬಿತ ರೈತರಿಗೂ ಆಘಾತವಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು.

ವಿಧಾನಸೌಧದಲ್ಲಿ ಜಂಟಿಯಾಗಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಬಾರ್ಡ್‌ನಿಂದ ವರ್ಷ 9,200 ಕೋಟಿ ರೂ. ನಿರೀಕ್ಷೆಯಿತ್ತು. ಆದರೆ 2,340 ಕೋಟಿ ರೂ. ಹಂಚಿಕೆ ಮಾಡಿದ್ದು, ಕಳೆದ ವರ್ಷದ 5,600 ಕೋಟಿ ರೂ.ಗೆ ಹೋಲಿಸಿದರೆ ಶೇ.58ರಷ್ಟು ಕಡಿಮೆಯಾಗಿದೆ ಎಂದರು.

ಸಹಕಾರ ಸಂಘ-ಸಂಸ್ಥೆಗಳಿಂದ ಬಡ್ಡಿರಹಿತ ಅಲ್ಪಾವಧಿ ಬೆಳೆ ಸಾಲ ನೀಡುವುದು ಕಷ್ಟವಾಗಲಿದೆ. ಕೃಷಿ ಮೇಲೆ ಅಡ್ಡಪರಿಣಾಮಬೀರಲಿದ್ದು, ಆಹಾರಧಾನ್ಯ ಉತ್ಪಾದನೆ ಕುಸಿತವಾಗಲಿದೆ. ಹೊಸ ರೈತರು ಸಾಲ ವಂಚಿತರಾಗಿ ದುಬಾರಿ ಬಡ್ಡಿ ದರದ ಖಾಸಗಿ ಸಾಲಕ್ಕೆ ಮೊರೆ ಹೋಗಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ರೈತರಿಗೆ ಶಕ್ತಿ ತುಂಬುವುದು ಕೇಂದ್ರ, ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಲಾಭದಾಯಕ ವ್ಯವಹಾರಗಳಿಗೆ ಮಾತ್ರ ಸಾಲ ಕೊಡುತ್ತೇವೆ ಎನ್ನುವುದಾದರೆ ಸರ್ಕಾರಗಳು ಕಾರ್ಪೋರೇಟ್ ಸಂಸ್ಥೆಗಳೆ ? ಎಂದು ಖಾರವಾಗಿ ಪ್ರಶ್ನಿಸಿದರು.

ಕಾರ್ಪೋರೇಟ್ ಸಂಸ್ಥೆಗಳ ಸಾಲ ಮನ್ನಾ

ರಾಜ್ಯ ಸರ್ಕಾರದ ಕೋರಿಕೆಯಂತೆ ರಿಯಾಯಿತಿ ಬಡ್ಡಿ ದರದ ಪುನರ್ಧನ 9,200 ಕೋ.ರೂ. ಹಂಚಿಕೆ ಕೇಂದ್ರ ಸಹಕಾರ, ಹಣಕಾಸು, ಕೃಷಿ ಸಚಿವರಿಗೆ ಪತ್ರ ಬರೆದರೂ ಸ್ಪಂದಿಸಿಲ್ಲ. ಪ್ರಧಾನಿ ಸೇರಿ ಕೇಂದ್ರ ಸಚಿವರಿಗೆ ಸಿಎಂ ಪತ್ರ ಬರೆದಿದ್ದು, ಉತ್ತರಿಸಿಲ್ಲವೆಂದು ಕೆ.ಎನ್.ರಾಜಣ್ಣ ಬೇಸರ ವ್ಯಕ್ತಪಡಿಸಿದರು.

ಸಂಸತ್ತಿನ ಅಧಿವೇಶನದಲ್ಲಿ 6-2-2024ರಂದು ಚುಕ್ಕೆ ಗುರುತಿನ ಪ್ರಶ್ನೆಯೊಂದಕ್ಕೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಉತ್ತರ ಪ್ರಕಾರದ ಕಾರ್ಪೋರೇಟ್ ಸಂಸ್ಥೆಗಳ 14.55 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ.

ಕೇಂದ್ರ ಸರ್ಕಾರವಲ್ಲ, ಆರ್‌ಬಿಐ ಮನ್ನಾ ಮಾಡಿದೆ ಎನ್ನುವ ಮಾತು ಸೇರಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನವಿಲ್ಲದೆ ಆರ್‌ಬಿಐ ಇಂತಹ ನಿರ್ಧಾರಕ್ಕೆ ಬರುತ್ತದೆಯೆ ?. ರೈತರ ಸಾಲ ಮನ್ನಾ ಮಾಡಿದರೆ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ ಎಂದು ಹೇಳುವ ಕೇಂದ್ರ ಸರ್ಕಾರ, ರೈತರ ಪರವೆಂದು ಹುಸಿ ಕಾಳಜಿ ಬೇರೆ ತೋರಿಸುತ್ತದೆ ಎಂದು ಟೀಕಿಸಿದರು.

ಸಹಕಾರಿ ವಲಯಕ್ಕೆ ಸಂಬಂಧಿಸಿದಂತೆ 26ರಿಂದ ರಾಷ್ಟ್ರೀಯ ಸಮ್ಮೇಳನ ಶುರುವಾಗಲಿದೆ. ಇದೇ ಸಂದರ್ಭದಲ್ಲಿ ಸಹಕಾರ ನಿಯೋಗ ತೆರಳಿ, ಕೇಂದ್ರ ಸಹಕಾರ ಸಚಿವ ಅಮಿತ್ ಷಾ, ಕಾಲಾವಕಾಶ ಲಭಿಸಿದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಭೇಟಿಯಾಗುವ ಉದ್ದೇಶವಿದೆ ಎಂದರು.

ಕೇಂದ್ರ ಸರ್ಕಾರ ಪ್ರತ್ಯೇಕ ಸಚಿವಾಲಯ ಸೃಜನೆ ಮಾಡಿದ್ದಲ್ಲದೆ, ಕಾಯ್ದೆಗೆ ತಿದ್ದುಪಡಿ ತಂದಿದೆ. ಜತೆಗೆ ಅನುಭವಿ ಷಾ ಅವರಿಗೆ ಈ ಖಾತೆ ಜವಾಬ್ದಾರಿ ಹೊತ್ತಾಗ ಅಪಾರ ನಿರೀಕ್ಷೆಯಿತ್ತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಗಣಕೀಕರಿಸಿ, ವಿವಿಧೋದ್ದೇಶ ಸಹಕಾರ ಸಂಘಗಳೆಂದು ಪರಿವರ್ತನೆ ಮಾಡಿದರು.

ಆದರೆ ಗಣಕೀಕರಣದ ಮೂಲಕ ಪ್ರತಿಯೊಂದು ಸಂಘ-ಸಂಸ್ಥೆಗಳ ದತ್ತಾಂಶಗಳನ್ನು ಪಡೆದಿದ್ದು, ಲಾಭದಾಯಕ ಸಂಘಗಳನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ವರ್ಗಾಯಿಸಲು ಉತ್ಸುಕರಾಗಿದ್ದಾರೆ ಎಂದು ಕೆ.ಎನ್.ರಾಜಣ್ಣ ಶಂಕಿಸಿದರು.

ಹೋರಾಟದ ಎಚ್ಚರಿಕೆ

ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ ಹಿಂದೆ ಬರ ನೆರವು ನೀಡುವಲ್ಲಿಯೂ ಮೀನಮೇಷ ಎಣಿಸಿತ್ತು. ಸುಪ್ರೀಂ ಕೋರ್ಟ್‌ಗೆ ಮೊರೆ ಹೋದ ನಂತರ ಪರಿಹಾರ ಬಿಡುಗಡೆ ಮಾಡಿತು. ಕೇಂದ್ರ ಸರ್ಕಾರದ ತಾರತಮ್ಯ, ದ್ವೇಷದ ರಾಜಕಾರಣದ ವಿರೋಧಿಸಿ ಮತ್ತೆ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾದೀತು ಎಂದು ಎಚ್ಚರಿಸಿತು.

ಬೆಳೆ ಸಾಲದ ಸಮಸ್ಯೆಯು ಆಹಾರಧಾನ್ಯ ಉತ್ಪಾದನೆ ಕುಸಿತಕ್ಕೆ ಕಾರಣವಾಗಲಿದೆ. ರೈತರ ಪರವಾಗಿ ನಾವು ಎಂದು ದೊಡ್ಡದಾಗಿ ಹೇಳಿಕೊಳ್ಳುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ ಈ ಬಗ್ಗೆ ಮೌನವಹಿಸಿರುವುದೇಕೆ ? ಎಂದು ಕೇಳಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳನ್ನು ಕೇಂದ್ರ ಸರ್ಕಾರ ಸಮಾನವಾಗಿ ಕಾಣಬೇಕು. ಪಕ್ಷ ರಾಜಕಾರಣದ ನೆಲೆಯಲ್ಲಿ ಕರ್ನಾಟಕ, ರೈತರು, ನಾಡಿನ ಜನರನ್ನು ದ್ವೇಷಿಸುವುದು ಸರಿಯಲ್ಲ ಎಂದು ಎನ್.ಚಲುವರಾಯಸ್ವಾಮಿ ತಿವಿದರು.