ಸಾಂದರ್ಭಿಕ ಚಿತ್ರ 
ನ್ಯೂಸ್

ಶೆಲ್ಟರ್ ಹೋಮ್‌ನಲ್ಲಿ ಮಕ್ಕಳ ಮೇಲೆ ಅಮಾನವೀಯ ಹಲ್ಲೆ; ಬಾಲಕರ ಮುಖಕ್ಕೆ ಮಲ ಸವರಿದ ಆರೋಪ | Children Abuse

ಗುಜರಾತ್‌ನ ಕಚ್ ಜಿಲ್ಲೆಯ ಮಕ್ಕಳ ಆಶ್ರಯ ಕೇಂದ್ರದಲ್ಲಿ 14 ವರ್ಷದೊಳಗಿನ ಎಂಟು ಬಾಲಕರ ಮೇಲೆ ಹಲ್ಲೆ ನಡೆಸಿ, ಅವರ ಮುಖಕ್ಕೆ ಮಾನವ ಮಲ ಬಳಕೆ ಮಾಡಿದ ಆರೋಪ ಮನೆ ಮೇಲ್ವಿಚಾರಕಿ ವಿರುದ್ಧ ಕೇಳಿಬಂದಿದೆ.

Gujarat Children Abuse: ಮಕ್ಕಳನ್ನು ನೋಡಿಕೊಳ್ಳಬೇಕಾದ ಆಶ್ರಯ ಕೇಂದ್ರದಲ್ಲೇ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಕಚ್ ಜಿಲ್ಲೆಯ ಕೇಂದ್ರವೊಂದರಲ್ಲಿ 14 ವರ್ಷದೊಳಗಿನ ಎಂಟು ಬಾಲಕರಿಗೆ ಹೊಡೆದು, ಬೈದು, ಮುಖಕ್ಕೆ ಮಾನವ ಮಲ ಸವರಿದ ಆರೋಪ ಮನೆ ಮೇಲ್ವಿಚಾರಕಿ ಲತೀಫಾ ಬೇಗಂ ವಿರುದ್ಧ ಕೇಳಿಬಂದಿದೆ. ಈ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಭುಜ್ ತಾಲ್ಲೂಕಿನ ಗಡಾ ಗ್ರಾಮದ ಭುಜೋಡಿ ಮೇಲ್ಸೇತುವೆ ಹತ್ತಿರ ಇರುವ ಎಸ್‌ಒಎಸ್ ಚಿಲ್ಡ್ರನ್ಸ್ ವಿಲೇಜ್ ಆಶ್ರಯ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಚ್-ಭುಜ್ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ವಿಪುಲ್ ಡೋರಿಯಾ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ಶುಕ್ರವಾರ ಮಾಧಾಪರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೇ ತಿಂಗಳಲ್ಲೇ ಮಕ್ಕಳ ಮೇಲೆ ಹಲ್ಲೆ ಆರೋಪ

ದೂರಿನ ಪ್ರಕಾರ, ಮೇ ತಿಂಗಳಿನಲ್ಲಿ ಮಕ್ಕಳ ಮೇಲೆ ಹಲ್ಲೆ ನಡೆಸಿ, ನಿಂದಿಸಲಾಗಿದೆ ಎನ್ನಲಾಗಿದೆ. ಸಣ್ಣಪುಟ್ಟ ಕಾರಣಗಳಿಗೂ ಮಕ್ಕಳನ್ನು ಹೊಡೆಯುವುದು, ಕೆಟ್ಟದಾಗಿ ಬೈಯುವುದು ಸೇರಿದಂತೆ ಹಲವು ರೀತಿಯಲ್ಲಿ ಹಿಂಸೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಮಕ್ಕಳ ಮುಖಕ್ಕೆ ಮಾನವ ಮಲ ಎಸೆದಿರುವ ಆರೋಪವೂ ಇದೆ.

ಅಕ್ಟೋಬರ್ 5ರಂದು ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಇಮೇಲ್ ಬಂದ ಬಳಿಕ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತನಿಖೆ ಆರಂಭಿಸಿತ್ತು. ಈ ವೇಳೆ ವಿಪುಲ್ ಡೋರಿಯಾ ಸಂತ್ರಸ್ತ ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಂಡು ಪೊಲೀಸರಿಗೆ ಸಲ್ಲಿಸಿದ್ದಾರೆ. ಈ ಘಟನೆಗಳಿಂದ ಮಕ್ಕಳು ತೀವ್ರ ಮಾನಸಿಕ ನೋವು ಮತ್ತು ಆಘಾತಕ್ಕೆ ಒಳಗಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆಶ್ರಯ ಕೇಂದ್ರದ ಆಡಳಿತದ ನಿರ್ಲಕ್ಷ್ಯ?

ಈ ಪ್ರಕರಣದಲ್ಲಿ ಆಶ್ರಯ ಕೇಂದ್ರದ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆಯೂ ಆರೋಪ ಕೇಳಿಬಂದಿದೆ. ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಅಧಿಕಾರಿಗಳಿಗೆ ಗೊತ್ತಿದ್ದರೂ ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ. ಬದಲಿಗೆ, ಆರೋಪ ಎದುರಿಸುತ್ತಿದ್ದ ಲತೀಫಾ ಬೇಗಂ ಅವರನ್ನು ಬೇರೆಡೆಗೆ ವರ್ಗಾಯಿಸಿ, ಆಂತರಿಕ ತನಿಖೆ ಆರಂಭಿಸಲಾಗಿತ್ತು. ಆದರೆ ಆ ತನಿಖೆಯಿಂದ ಯಾವುದೇ ಸ್ಪಷ್ಟ ಫಲಿತಾಂಶ ಬಂದಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಿಎನ್‌ಎಸ್‌, ಬಾಲ ನ್ಯಾಯ ಕಾಯ್ದೆಯಡಿ ಪ್ರಕರಣ

ಮಕ್ಕಳಿಗೆ ಗಾಯಗೊಳಿಸುವುದು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುವುದು ಅಥವಾ ಮಾತನಾಡುವುದು ಹಾಗೂ ಹಲ್ಲೆ ನಡೆಸುವುದಕ್ಕೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಕ್ಕಳ ಮೇಲಿನ ಕ್ರೌರ್ಯ ಮತ್ತು ಮಕ್ಕಳ ಆರೈಕೆ ಕೇಂದ್ರಗಳಲ್ಲಿ ದೈಹಿಕ ಶಿಕ್ಷೆ ನೀಡುವುದಕ್ಕೆ ಸಂಬಂಧಿಸಿದ ಬಾಲ ನ್ಯಾಯ ಕಾಯ್ದೆಯ ಸೆಕ್ಷನ್‌ಗಳನ್ನೂ ಸೇರಿಸಲಾಗಿದೆ. ತನಿಖೆ ಮುಂದುವರಿದಂತೆ ಈ ಪ್ರಕರಣದಲ್ಲಿ ಬೇರೆಯವರ ಪಾತ್ರವೂ ಕಂಡುಬಂದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

2001ರ ಭೂಕಂಪದ ಬಳಿಕ ಸ್ಥಾಪನೆಯಾದ ಆಶ್ರಯ ಕೇಂದ್ರ

2001ರಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಳಿಕ ಸರ್ಕಾರೇತರ ಸಂಸ್ಥೆಯೊಂದು ಈ ಆಶ್ರಯ ಕೇಂದ್ರವನ್ನು ಸ್ಥಾಪಿಸಿತ್ತು. ಈ ಕೇಂದ್ರ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2015ರ ಅಡಿಯಲ್ಲಿ ನೋಂದಣಿಯಾಗಿದೆ.

ಇದನ್ನೂ ಓದಿ: 40ರ ವಯಸ್ಸಿನಲ್ಲಿ ಫಿಟ್‌ನೆಸ್ ಮಂತ್ರ: ಟ್ರೆಂಡ್‌ಗಳ ಹಿಂದೆ ಓಡಬೇಡಿ ಎಂದ ರಣ್‌ವಿಜಯ್ ಸಿಂಘಾ! | Ranvijay Singha Fitness

ಇಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇದೆ. ಅನಾಥರು, ನಿರ್ಗತಿಕರು ಹಾಗೂ ನೆರವಿನ ಅಗತ್ಯವಿರುವ ಮಕ್ಕಳಿಗೆ ಇಲ್ಲಿ ಆಶ್ರಯ ನೀಡಲಾಗುತ್ತದೆ. ಕಚ್-ಭುಜ್ ಮಕ್ಕಳ ಕಲ್ಯಾಣ ಸಮಿತಿ (CWC) ಮೂಲಕ ಮಕ್ಕಳನ್ನು ಈ ಕೇಂದ್ರಕ್ಕೆ ದಾಖಲಿಸಲಾಗುತ್ತದೆ. ಸದ್ಯ ಇಲ್ಲಿ ಒಟ್ಟು 82 ಮಕ್ಕಳು ಆಶ್ರಯ ಪಡೆದಿದ್ದಾರೆ. (ಏಜೆನ್ಸೀಸ್)