ನ್ಯೂಸ್

ಶಿಕ್ಷಣ ಸಂಸ್ಥೆಯಲ್ಲಿ ಅಮಾನವೀಯ ಕೃತ್ಯ: 4 ವರ್ಷದ ಬಾಲಕಿಯ ಮೇಲೆ ಸಿಬ್ಬಂದಿಯಿಂದಲೇ ಲೈಂಗಿಕ ಕಿರುಕುಳ| School

School: ಮುಂಬೈನ ಶಾಲೆಯೊಂದರಲ್ಲಿ 4 ವರ್ಷದ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಅಲ್ಲಿನ ಸಹಾಯಕ ಸಿಬ್ಬಂದಿ (40) ಯನ್ನು ಗೋರೆಗಾಂವ್ ಪೊಲೀಸರು ಬಂಧಿಸಿರುವ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ.

ಕುಟುಂಬದವರ ದೂರು ಏನು?

ಪೊಲೀಸರ ಪ್ರಕಾರ, ಬಾಲಕಿಯ ಅಜ್ಜಿ ಪ್ರತಿನಿತ್ಯ ಆಕೆಯನ್ನು ಶಾಲೆಗೆ ಕರೆದುಕೊಂಡು ಹೋಗುವ ಕೆಲಸವನ್ನು ಮಾಡುತ್ತಿದ್ದರು. ಈ ವೇಳೆ ಬಾಲಕಿಯು ಶಾಲೆಯಿಂದ ಮನೆಗೆ ವಾಪಾಸ್ಸು ಬಂದಾಗ ಬಟ್ಟೆ ಬದಲಾಯಿಸುವ ಸಮಯದಲ್ಲಿ ದೇಹದ ಒಂದು ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದರ ಬಗ್ಗೆ ಮನೆಯಲ್ಲಿದ್ದವರಿಗೆ ತಿಳಿಸಿದ್ದಾಳೆ.

ಈ ವಿಷಯದ ಬಗ್ಗೆ ಆಕೆಯ ಪಾಲಕರು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಿದ್ದು, ಅಲ್ಲಿನ ವೈದ್ಯರು ಲೈಂಗಿಕ ಕಿರುಕುಳದ ಬಗ್ಗೆ ಮಾಹಿತಿ ತಿಳಿಸಿದ್ದಾರೆ. ಇದಾದ ಬಳಿಕ ಈ ವಿಷಯದ ಕುರಿತು ಶಾಲೆಯ ಸಹಾಯಕ ಸಿಬ್ಬಂದಿ ಮೇಲೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ.

ಪೊಕ್ಸೋ ಪ್ರಕರಣ ದಾಖಲು

ಈ ಘಟನೆ ಬೆಳಕಿಗೆ ಬಂದಂತೆ ಗೋರೆಗಾಂವ್ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದು, ಶಾಲೆಯ ಸಿಸಿಟಿವಿ ದೃಶ್ಯವನ್ನು ವೀಕ್ಷಿಸಿದ್ದಾರೆ. ಪೊಕ್ಸೋ ಕಾಯ್ದೆಯಡಿ ಶಾಲೆಯ ಸಹಾಯಕ ಸಿಬ್ಬಂದಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಆರೋಪಿಯನ್ನು ದಿಂಡೋಶಿಯಲ್ಲಿರುವ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಸೆಪ್ಟೆಂಬರ್ 19 ರವರೆಗೆ ಪೊಲೀಸ್ ಕಸ್ಟಡಿಯಲ್ಲಿರಬೇಕೆಂದು ತಿಳಿಸಿದೆ. (ಏಜೆನ್ಸೀಸ್​)