ಬೆಂಗಳೂರು: ಪಶ್ಚಿಮ ಘಟ್ಟದ ಮತ್ತು ತಪ್ಪಲಿನಲ್ಲಿ ವಾಸವಿರುವ ಆದಿಮ ಸೂಕ್ಷ್ಮ ಬುಡಕಟ್ಟು ಸಮುದಾಯಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.
ಆದಿವಾಸಿ ಅಧಿಕಾರ ರಾಷ್ಟ್ರೀಯ ಮಂಚ್ ಅಧ್ಯಕ್ಷ ಜಿತೇಂದ್ರ ಚೌಧರಿ ಮತ್ತು ಉಪಾಧ್ಯಕ್ಷೆ , ಮಾಜಿ ಸಂಸದೆ ಬೃಂದಾ ಕಾರಟ್(Infrastructure for tribals; Delegation led by Brinda Karat meets CM)ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಹ ಸಂಚಾಲಕರಾದ ಡಾ.ಎಸ್.ವೈ.ಗುರುಶಾಂತ್, ಶ್ರೀಧರ್ ನಾಡ, ಡಾ.ಕೃಷ್ಣಪ್ಪ ಕೊಂಚಾಡಿ, ಜಿ.ಆರ್.ಪ್ರೇಮ ನಿಯೋಗದಲ್ಲಿ ಉಪಸ್ಥಿತರಿದ್ದರು.
ಆದಿಮ ಸೂಕ್ಷ್ಮ ಬುಡಕಟ್ಟು ಸಮುದಾಯಗಳು ಜೀವನಾಧಾರದ ಅಭದ್ರತೆಯಿಂದಾಗಿ ಅಪೌಷ್ಟಿಕತೆ, ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವ ವಿಚಾರವನ್ನೂ ನಿಯೋಗ ಮುಖ್ಯಮಂತ್ರಿಗಳ ಗಮನಕ್ಕೆ ತಂದಿತು.
-ಅಳಿವಿನಂಚಿನಲ್ಲಿರುವ ಕೊರಗ ಸಮುದಾಯದ ಅಧ್ಯಯನ ನಡೆಸಿ ಪರಿಹಾರ ಕಂಡುಕೊಂಡು ಸಮುದಾಯದ ಉಳಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಬೇಕು.
-ಕೊರಗರ ಆರೋಗ್ಯದ ಬಜೆಟ್ ಬಿಡುಗಡೆ ಮಾಡಬೇಕು. ಎರಡು ವರ್ಷ ಅನುದಾನ
ಬಿಡುಗಡೆ ಆಗದೆ ಜಿಲ್ಲೆಯ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ ಸಾಲದ
ಮೂಲಕ ಖಾಸಗಿ ಆಸ್ಪತ್ರೆಯಲ್ಲಿ ಕೊರಗರಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇದೆ. ಆದರಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಕೊರಗ ಸಮುದಾಯಕ್ಕೆ ಈ ಹಿಂದಿನಂತೆ ಆರೋಗ್ಯದ ಅನುದಾನ ನೀಡಬೇಕು.
-ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ನಾಡ ಗ್ರಾಮದ ಪಡುಕೋಣೆ ಕೊರಗ ಸಮುದಾಯ
11 ಕುಟುಂಬಕ್ಕೆ ಸೇರಿದ ಅವರ ಭೂಮಿಯನ್ನು ಬಲಾಡ್ಯ ರಿಂದ ರಕ್ಷಣೆ ಮಾಡಿಕೊಡಬೇಕು.
-ಹಾಸನ ಜಿಲ್ಲೆಯ ಹಸಲರು ಸಮುದಾಯಕ್ಕೆ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಸಲರು ಸಮುದಾಯಕ್ಕೆ ನೀಡುತ್ತಿರುವ ಉಚಿತ ಪೌಷ್ಟಿಕ ಆಹಾರ ಯೋಜನೆ ವಿಸ್ತರಣೆ ಮಾಡಬೇಕು.
-ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕಿನ ಅರಣ್ಯ ಭೂಮಿಯಲ್ಲಿ ವಾಸವಾಗಿರುವ ಹಸಲರು ಸಮುದಾಯಕ್ಕೆ ವಸತಿ ನಿಗಮ ಮತ್ತು ಪರಿಶಿಷ್ಟ ಕಲ್ಯಾಣ ಇಲಾಖೆಯ ಮೂಲಕ ವಸತಿ ಸೌಲಭ್ಯ ಒದಗಿಸಬೇಕು.
-ಅರಣ್ಯ ಪ್ರದೇಶದಲ್ಲಿ ವಾಸಿಸುವ ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ಹಕ್ಕು ಪತ್ರ
ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡಬೇಕು.
-ಅಡಕೆ ತೋಟದಲ್ಲಿ ಅಪಾಯಕಾರಿ ಕೆಲಸ ಮಾಡುವ ಶಿವಮೊಗ್ಗ ಜಿಲ್ಲೆಯ ಹಸಲರು ಜನಾಂಗದ ಕುಟುಂಬಕ್ಕೆ ಆರೋಗ್ಯ, ಜೀವನ ಭದ್ರತೆ ಒದಗಿಸಬೇಕು.
-ಕೊಡಗು ಜಿಲ್ಲೆಯಲ್ಲಿ ಆದಿವಾಸಿ ಸಮುದಾಯಗಳು ಭೂಮಿ ಇಲ್ಲದೇ, ಅರಣ್ಯ ಹಕ್ಕುಗಳ ಕಾಯ್ದೆಯನ್ವಯ ಭೂಮಿ ಮತ್ತು ಸಮುದಾಯ ಹಕ್ಕುಗಳನ್ನು ಪಡೆಯಲಾಗುತ್ತಿಲ್ಲ. ಈ ಸಮಸ್ಯೆ ಇತ್ಯರ್ಥಪಡಿಸಬೇಕು.
-ಟಿಎಸ್‌ಪಿ ಮತ್ತು ಎಸ್‌ಸಿಪಿ ಯೋಜನೆಯ ಅನುಷ್ಠಾನದ ಅನುಭವಗಳ ಕ್ರೋಢೀಕರಣಕ್ಕಾಗಿ ಒಂದು ವೈಜ್ಞಾನಿಕ ಅಧ್ಯಯನದ ವ್ಯವಸ್ಥೆ ಮಾಡಬೇಕು.
-ಪ್ರತಿ ಜಿಲ್ಲೆಯಲ್ಲಿ ಆದಿವಾಸಿ ಅದಾಲತ್ ನಡೆಸಬೇಕು.