ನ್ಯೂಸ್

ಅಮೆರಿಕದಲ್ಲಿದ್ದ ಉದ್ಯೋಗಿಗಳನ್ನು ಭಾರತಕ್ಕೆ ಕರೆಯಿಸಿಕೊಂಡ ಇನ್ಫಿ

ನವದೆಹಲಿ: ಕೋವಿಡ್​ 19 ಸೋಂಕಿನ ಸಂಕಷ್ಟಕ್ಕೆ ಒಳಗಾಗಿ ಅಮೆರಿಕದಲ್ಲಿ ಸಿಲುಕಿದ್ದ 200 ಉದ್ಯೋಗಿಗಳು ಮತ್ತು ಅವರ ಕುಟುಂಬದವರನ್ನು ಪ್ರತಿಷ್ಠಿತ ಐಟಿ ಕಂಪನಿ ಇನ್ಪೋಸಿಸ್ ಭಾರತಕ್ಕೆ ಕರೆಯಿಸಿಕೊಂಡಿದೆ. ಇದಕ್ಕಾಗಿ ವಿಶೇಷ ಚಾರ್ಟೆಡ್ ವಿಮಾನದ ವ್ಯವಸ್ಥೆ ಮಾಡಿದ ಕಂಪನಿ, ಉದ್ಯೋಗಿಗಳ ಸುರಕ್ಷಿತ ವಾಪಸಾತಿಯನ್ನು ಖಾತರಿಗೊಳಿಸಿದೆ.

ಅಮೆರಿಕದ ಸ್ಯಾನ್​ಫ್ರಾನ್ಸಿಸ್ಕೋದಿಂದ ಇನ್ಪೋಸಿಸ್​ನ ನೂರಾರು ಉದ್ಯೋಗಿಗಳು ಹಾಗೂ ಅವರ ಕುಟುಂಸ್ಥರನ್ನು ಹೊತ್ತು ವಿಶೇಷ ವಿಮಾನ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ತಲುಪಿದೆ ಎಂದು ಇನ್ಪೋಸಿಸ್​ನ ಸಿಪಿಜಿ ಮತ್ತು ಲಾಜಿಸ್ಟಿಕ್ಸ್​ನ ಅಸೋಸಿಯೇಟ್ ಉಪಾಧ್ಯಕ್ಷ ಸಮೀರ್ ಗೋಸಾವಿ ತಿಳಿಸಿದ್ದಾರೆ.

ಈ ವಿಮಾನದಲ್ಲಿ ಇನ್ಪೋಸಿಸ್ ಉದ್ಯೋಗಿಗಳ ಜತೆಗೆ 206 ಅನ್ಯ ಪ್ರಯಾಣಿಕರು ಕೂಡ ಇದ್ದರು. ಇವರೆಲ್ಲ ಕರೊನಾ ಬಿಕ್ಕಟ್ಟಿನಿಂದಾಗಿ ಅಮೆರಿಕದಲ್ಲಿ ಸಿಲುಕಿದ್ದರು. ಇನ್ಪೋಸಿಸ್​ನ ಉದ್ಯೋಗಿಗಳಲ್ಲಿ ಕೆಲವರು ಅಲ್ಲೇ ಕೆಲಸ ನಿರ್ವಹಿಸುವವರಾಗಿದ್ದು, ಇನ್ನೂ ಕೆಲವರು ಪ್ರಾಜೆಕ್ಟ್ ಹಾಗೂ ಸಭೆಗಳಿಗಾಗಿ ಅಮೆರಿಕಕ್ಕೆ ತೆರಳಿ ಅಲ್ಲಿ ಸಿಲುಕಿಕೊಂಡಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ. 2020ರ ಮಾರ್ಚ್​ಗೆ ಅಂತ್ಯವಾದ ಹಣಕಾಸು ವರ್ಷದಲ್ಲಿ ಇನ್ಪೋಸಿಸ್​ಗೆ ಶೇಕಡಾ 60 ರಷ್ಟು ಆದಾಯ ಅಮೆರಿಕದಿಂದಲೇ ಬಂದಿದೆ. (ಏಜೆನ್ಸೀಸ್)