ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ, ಜಾನಪದ ಉತ್ಸವ: ಪ್ರತಿಭಾ ಶೋಧ 2025ರ ಕಾರ್ಯಕ್ರಮದಲ್ಲಿ ಹೆಬ್ಬಾಳು ಹಾಲಪ್ಪ, ಡಾ.ಮಹೇಶ್, ಡಾ.ನಾಗೇಂದ್ರಪ್ಪ, ಮರಿಯಾ ಪಿಂಟೋ, ಬಾಬು ಪ್ರಸಾದ್, ಮಧು, ಲೋಕೇಶ್, ಮೋಹನ್‌ಕುಮಾರ್ ಇತರರಿದ್ದರು. 
ನ್ಯೂಸ್

ಜಾನಪದ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸಿ

ಬೇಲೂರು: ನಾಗರಿಕತೆಯ ನಾಗಲೋಟದಲ್ಲಿ ಜನರಿಂದ ಮರೆಯಾಗುತ್ತಿರುವ ಜಾನಪದ ಉಳಿಸುವ ನಿಟ್ಟಿನಲ್ಲಿ, ಜಾನಪದದ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ, ವೈಡಿಡಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಹೆಬ್ಬಾಳು ಹಾಲಪ್ಪ ಹೇಳಿದರು.

ಪಟ್ಟಣ ಸಮೀಪದ ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅವರಣ ಕಾಲೇಜು ಶಿಕ್ಷಣ ಇಲಾಖೆ, ಐಕ್ಯೂಎಸಿ ಹಾಗೂ ಸಾಂಸ್ಕೃತಿಕ ವೇದಿಕೆಯಿಂದ ಗುರುವಾರ ಆಯೋಜಿಸಿದ್ದ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ-ಜಾನಪದ ಉತ್ಸವ: ಪ್ರತಿಭಾ ಶೋಧ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಬದುಕೇ ಜಾನಪದ ಸಾಹಿತ್ಯದ ಮೂಲ. ಜಾನಪದದಲ್ಲಿ ಮೂಲ ಶಿಕ್ಷಣದ ಪಾಠ ಇವೆ. ಪೂರ್ವಜರು ಜಾನಪದ ಸಾಹಿತ್ಯದ ಮೂಲಕ ಸಮಾಜದ ಮೌಲ್ಯಗಳನ್ನು ತಿಳಿಸುವ ಕೆಲಸ ಮಾಡುತಿದ್ದರು. ವಿದ್ಯಾರ್ಥಿಗಳು ಜಾನಪದ ಸಾಹಿತ್ಯದ ಬಗ್ಗೆ ತಿಳಿಯಬೇಕು. ಜಾನಪದ ಗೀತೆ, ಗಾದೆ, ಒಗಟುಗಳನ್ನು ಸಂಗ್ರಹಿಸುವತ್ತ ಗಮನ ಹರಿಸಬೇಕು. ಕಂಸಾಳೆ ಪದ, ಗೀಗಿಪದ, ಕೋಲಾಟದ ಪದ, ರಾಗಿ ಬೀಸೋ ಪದದಂತಹ ಸುಗ್ಗಿ ಹಾಡುಗಳು, ವಿವಿಧ ಬಗೆಯ ಜಾನಪದ ಗೀತೆಗಳು ಆಯಾ ಪ್ರದೇಶದ ಜನರ ದೈನಂದಿನ ಚಟುವಟಿಕೆ, ಕೌಟುಂಬಿಕ ಸಂಬಂಧ, ದೇವರು ಹಾಗೂ ಧಾರ್ಮಿಕ ಆಚರಣೆಗಳನ್ನು ತೆರೆದಿಡುತ್ತವೆ. ಇಂತಹ ಕಾರ್ಯಕ್ರಮ ಇಂದಿಗೆ ಪೂರಕವಾಗಿವೆ ಎಂದರು.

ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಮಹೇಶ್ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಭಾರತೀಯ ಸಂಸ್ಕೃತಿ ಜಾನಪದ ಕಲೆಗಳು, ಗ್ರಾಮೀಣ ಭಾಗದ ಸಂಸ್ಕೃತಿ ಮರೆಯಾಗುತ್ತಿದೆ. ಜನಪದ ಕಲೆಗಳಿಂದ ಸ್ವಾಸ್ಥೃ ಸಮಾಜ ನಿರ್ಮಿಸಲು ಜಾನಪದ ಸಾಹಿತ್ಯವು ಪ್ರೀತಿಯ ಪಾಠ ಮಾಡುತ್ತದೆ. ಜೀವನಕ್ಕೆ ನೀತಿ ಪಾಠಗಳೊಂದಿಗೆ ಸಂಬಂಧ ಬೆಸೆಯುವ ಜಾನಪದ ಸಾಹಿತ್ಯ ಇಂದು ಅಳಿವಿನಂಚಿನಲ್ಲಿದೆ. ಜಾನಪದ ಸಾಹಿತ್ಯದ ಉಳಿವಿಗಾಗಿ ಸಂಶೋಧನೆಗಳಾಗಬೇಕಿದೆ. ನಮ್ಮ ಕಾಲೇಜಿನಲ್ಲಿ ಮುಂದಿನ ದಿನಗಳಲ್ಲಿ ಜಾನಪದ ಸುಗ್ಗಿ ಸಂಭ್ರಮ ಆಚರಿಸಲಾಗುತ್ತದೆ ಎಂದರು.

ಉಪನ್ಯಾಸಕರಾದ ಡಾ.ನಾಗೇಂದ್ರಪ್ಪ, ಮರಿಯಾ ಪಿಂಟೋ, ಬಾಬು ಪ್ರಸಾದ್, ಮಧು, ಲೋಕೇಶ್, ಮೋಹನಕುಮಾರ್, ವಸಂತಕುಮಾರ್, ಪವಿತ್ರಾ, ದಿವ್ಯಶ್ರೀ, ವೀರಭದ್ರಪ್ಪ, ಪದ್ಮೇಗೌಡ, ಮಲ್ಲೇಶ್‌ಗೌಡ, ಪುಟ್ಟಸ್ವಾಮಿ ಇದ್ದರು.