ಶಿವಮೊಗ್ಗ: ಆಹಾರ ಉತ್ಪಾದನೆಯಲ್ಲಿ ಹೈಬ್ರೀಡ್ ಬೀಜಗಳ ಬಳಕೆ ಬಂಜೆತನ ಮತ್ತು ನಪುಂಸಕತ್ವಕ್ಕೆ ಒಂದು ಕಾರಣ ಆಗಿರುವ ಸಾಧ್ಯತೆ ಇದೆ ಎಂದು ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ವೀರಶೈವ ಕಲ್ಯಾಣ ಮಂದಿರದಲ್ಲಿ ಶನಿವಾರ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಸಹಜ ಸಮೃದ್ಧಿ ಸಹಯೋಗದೊಂದಿಗೆ ಆಯೋಜಿಸಿದ್ದ ದೇಸಿ ಬೀಜೋತ್ಸವ ಉದ್ಘಾಟಿಸಿ ಆಶೀವರ್ಚನ ನೀಡಿದರು.
ಶಿವಮೊಗ್ಗದಲ್ಲಿಯೂ ಇತ್ತೀಚೆಗೆ ಬಂಜೆತನ ನಿವಾರಣಾ ಕೇಂದ್ರಗಳು ಆರಂಭವಾಗಿವೆ. ಮಲೆನಾಡಿನಲ್ಲಿ ಇಂತಹ ಕೇಂದ್ರಗಳು ಇರಲಿಲ್ಲ. ಸಾಕಷ್ಟು ಜನರು ನಪುಂಸಕತ್ವ ಮತ್ತು ಬಂಜೆತನದಿಂದ ಬಳಲುತ್ತಿರುವುದನ್ನು ಸಮಾಜದಲ್ಲಿ ಕಾಣುತ್ತಿದ್ದೇವೆ. ಹೈಬ್ರೀಡ್ ಬೀಜಗಳಿಂದ ಬೆಳೆದ ಆಹಾರ ಉತ್ಪನ್ನಗಳನ್ನು ಬಳಕೆ ಮಾಡುತ್ತಿರುವುದರಿಂದ ಇದು ಆಗಿರುವ ಸಾಧ್ಯತೆಯೂ ಇದೆ. ಹೈಬ್ರೀಡ್ ಬೀಜಗಳಿಂದ ಹೇಗೆ ಮತ್ತೊಂದು ಸುತ್ತು ಬೆಳೆ ಬೆಳೆಯಲು ಆಗುವುದಿಲ್ಲವೋ, ಅದನ್ನು ಸೇವಿಸಿದ ಮಾನವರಲ್ಲಿಯೂ ವಂಶಾಭಿವೃದ್ಧಿ ಕುಂಠಿತ ಆಗುತ್ತಿರುವ ಸಾಧ್ಯತೆ ಇದೆ ಎಂದು ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಮಾತನಾಡಿ, ಸಾವಯವ ಕೃಷಿ ಪದ್ಧತಿ ಮತ್ತು ಗೋ ಸಂಸತಿ ಇರುವೆಡೆ ಆರೋಗ್ಯ ಸದೃಢವಾಗಿರುತ್ತದೆ ಎಂದರು. ಗೋ ಸಂತತಿ ಹೆಚ್ಚಿರುವ ಕಡೆ ಸಾವಯವ ಕೃಷಿ ನಡೆಯುತ್ತದೆ. ಸಾವಯಕ ಕೃಷಿಯಿಂದ ಜೈವಿಕತೆ ಹೆಚ್ಚಾಗುತ್ತದೆ. ಜತೆಗೆ ನೈಸರ್ಗಿಕ ಕೃಷಿ ಬಗ್ಗೆ ಒತ್ತು ನೀಡಬೇಕು. ಸಾವಯವ ಕೃಷಿಯಲ್ಲಿ ದೇಸಿ ಬೀಜಗಳನ್ನೇ ಬಳಕೆ ಮಾಡಬೇಕಿದೆ ಎಂದರು.
ತುಮಕೂರು ಧಾನ್ಯ ಸಂಸ್ಥೆಯ ಮಲ್ಲಿಕಾರ್ಜುನ ಹೊಸಪಾಳ್ಯ,ಶಿಕಾರಿಪುರದ ಸಾವಯವ ಕೃಷಿಕ ಶಂಕರ ಎಂ.ದೇವೇಂದ್ರಪ್ಪ, ದಾವಣಗೆರೆಯ ಐಕಾಂತಿಕ ಸಂಸ್ಥೆ ರಾಘವ ಮಾತನಾಡಿದರು. ಸಹಜ ಸಮೃದ್ಧ ಸಂಸ್ಥೆ ನಿರ್ದೇಶಕ ಜಿ.ಕೃಷ್ಣಪ್ರಸಾದ್, ಸಾವಯವ ಸಂಶೋಧನ ಕೇಂದ್ರದ ಸಂಯೋಜಕ ಡಾ. ಎಸ್.ಪ್ರದೀಪ್, ಸಾವಯವ ಕೃಷಿ ಪರಿವಾರದ ಸದಸ್ಯ ಬಿ.ಎಂ.ಮಲ್ಲಿಕಾರ್ಜುನ, ನಿವೃತ್ತ ಪ್ರಾಧ್ಯಾಪಕ ಡಾ. ಎ.ವಿ.ಪ್ರದೀಪ್, ಸಾವಯವ ಕೃಷಿಕ ನಂದೀಶ್ ಉಪಸ್ಥಿತರಿದ್ದರು.
ಗಮನ ಸೆಳೆದ ಬೀಜೋತ್ಸವ
ವೀರಶೈವ ಕಲ್ಯಾಣ ಮಂಟಪ್ಪದಲ್ಲಿ ಸಹಜ ಸಮೃದ್ಧ ಸಂಸ್ಥೆ ಮತ್ತು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಆಶ್ರಯದಲ್ಲಿ ಆರಂಭಗೊಂಡ ಎರಡು ದಿನಗಳ ದೇಸಿ ಬೀಜೋತ್ಸವ ಸಾರ್ವಜನಿಕರ ಗಮನ ಸೆಳೆಯಿತು. ಮೊದಲ ದಿನವೇ ನೂರಾರು ಮಂದಿ ಬೀಜೋತ್ಸವಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಮೇಳದಲ್ಲಿ 15ಕ್ಕೂ ಅಧಿಕ ಮಳಿಗೆ ತೆರೆಯಲಾಗಿತ್ತು. ರಾಜ್ಯದ ವಿವಿಧ ಕಡೆಗಳಿಂದ ರೈತರು ತಾವೇ ಸಿದ್ಧಪಡಿಸಿದ್ದ ದೇಸಿ ಬೀಜಗಳನ್ನು ಪ್ರದರ್ಶನ ಮಾಡಿದರು. ದೇಸಿ ತಳಿಯ ಭತ್ತ, ತರಕಾರಿ, ಸಿರಿಧಾನ್ಯ ಬೀಜಗಳು, ಹಣ್ಣುಗಳ ಬೀಜಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೀಡಲಾಗಿದೆ. ಜತೆಗೆ ಆಹಾರ ಮಳಿಗೆಗಳನ್ನೂ ತೆರೆಯಲಾಗಿತ್ತು. ಹಲಸು, ಮಾವು, ಪಪ್ಪಾಯಿ ಸೇರಿ ನಾನಾ ಬಗೆಯ ಹಣ್ಣುಗಳ ಖಾದ್ಯಗಳು ಮೇಳದಲ್ಲಿದ್ದವು.