ನ್ಯೂಸ್

ಯುರೋಪ್, ಮಧ್ಯಪ್ರಾಚ್ಯದಿಂದ ಭಾರತಕ್ಕೆ ಬಂದ ಸೋಂಕು

ಬೆಂಗಳೂರು: ಕೋವಿಡ್-19 ರೋಗಕ್ಕೆ ಕಾರಣವಾದ ಸಾರ್ಸ್ ಸಿಒವಿ-2 ವೈರಸ್ ಭಾರತಕ್ಕೆ ಯುರೋಪ್, ಮಧ್ಯಪ್ರಾಚ್ಯ, ಒಷಿಯಾನಿಯಾ (ಮಧ್ಯ ಮತ್ತು ದಕ್ಷಿಣ ಪೆಸಿಫಿಕ್ ಸಾಗರ ದ್ವೀಪಗಳು) ಮತ್ತು ದಕ್ಷಿಣ ಏಷ್ಯಾ ವಲಯಗಳಿಂದ ಹಬ್ಬಿರುವ ಸಾಧ್ಯತೆ ಹೆಚ್ಚಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್​ಸಿ) ಸಂಶೋಧಕರು ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಹೆಚ್ಚು ಪ್ರವಾಸ ಮಾಡಿದ ದೇಶಗಳಿಂದ ವೈರಾಣು ಹಬ್ಬಿರುವುದಕ್ಕೆ ಇದು ಬಲವಾದ ಪುರಾವೆಯಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸೂಕ್ಷ್ಮಾಣು ಜೀವಶಾಸ್ತ್ರ ಮತ್ತು ಕೋಶ ಜೀವಶಾಸ್ತ್ರ (ಸೆಲ್ ಬಯಾಲಜಿ) ವಿಭಾಗದ ಪೊ›. ಕುಮಾರವೇಲ್ ಸೋಮಸುಂದರಂ, ಮೈನಕ್ ಮಂಡಲ್ ಹಾಗೂ ಅಂಕಿತಾ ಲವಾರ್ಡೆ ಅವರನ್ನು ಒಳಗೊಂಡ ತಂಡ ನಡೆಸಿದ ವೈರಸ್ ಮೂಲ ಹಾಗೂ ಹರಡುವಿಕೆಯ ಸಾಧ್ಯತೆ ಬಗೆಗಿನ ಸಂಶೋಧನಾ ಅಧ್ಯಯನವನ್ನು ‘ಕರೆಂಟ್ ಸೈನ್ಸ್’ ಪತ್ರಿಕೆಯಲ್ಲಿ ಪ್ರಕಟಿಸಿದೆೆ. ತಂಡ ತನ್ನ ಅಧ್ಯಯನಕ್ಕೆ ಜೀವಾಣುಶಾಸ್ತ್ರವನ್ನು (ಜೆನೊಮಿಕ್ಸ್) ಬಳಸಿಕೊಂಡಿತ್ತು. -ಪಿಟಿಐ

ಕೆಲವು ಮಾದರಿಗಳು ಚೀನಾ ಮತ್ತು ಪೂರ್ವ ಏಷ್ಯಾ ಸಾಂಪಲ್​ಗಳಿಗೆ ಹೋಲುತ್ತವೆ. ಚೀನಾ, ಅದರ ನೆರೆಯ ದೇಶಗಳಿಂದ ಪ್ರವಾಸ ಮಾಡಿದ ಭಾರತೀಯರಿಂದ ವೈರಸ್ ಭಾರತಕ್ಕೆ ಬಂದಿರಬಹುದು ಎನ್ನುವುದನ್ನು ಇದು ಸೂಚಿಸುತ್ತದೆ. ‘ವೈರಸ್​ನ ಚೀನಿ ಪೂರ್ವಜ’ವನ್ನು ಅದು ಹೋಲುತ್ತದಾದ್ದರಿಂದ ಈ ಅಭಿಪ್ರಾಯಕ್ಕೆ ಬರಲಾಗಿದೆ. | ಐಐಎಸ್ಸಿ ಸಂಶೋಧನಾ ತಂಡ

ಸ್ಯಾಂಪಲ್​ಗಳ ಅಧ್ಯಯನ

‘ಭಾರತದ ಬಹುತೇಕ (137ರಲ್ಲಿ 129) ಸಾರ್ಸ್ ಸಿಒವಿ-2 ನಿರ್ದಿಷ್ಟ ದೇಶಗಳಿಗೆ ಹೋಲುತ್ತದೆನ್ನುವುದನ್ನು ಅಧ್ಯಯನ ಬಹಿರಂಗಪಡಿಸಿದೆ’ ಎಂದು ಲೇಖನ ಹೇಳಿದೆ. ಕ್ಲಸ್ಟರ್ ‘ಎ’ಯಲ್ಲಿ ಭಾರತದ ಸ್ಯಾಂಪಲ್​ಗಳು ಒಷಿಯಾನಿಯಾ, ಕುವೆತ್ ಮತ್ತು ದಕ್ಷಿಣ ಏಷ್ಯಾ ಸ್ಯಾಂಪಲ್​ಗಳಲ್ಲಿ ಸಿಕ್ಕ ಮಾದರಿಗಳಿಗೆ ಹೋಲುತ್ತವೆ. ಕ್ಲಸ್ಟರ್ ‘ಬಿ’ಯಲ್ಲಿನ ಸ್ಯಾಂಪಲ್​ಗಳು ಯುರೋಪ್​ಗೆ ಹೋಲುತ್ತವೆ. ಕೆಲವು ಮಧ್ಯ ಪ್ರಾಚ್ಯ, ದಕ್ಷಿಣ ಏಷ್ಯಾ ಮಾದರಿಗಳಿಗೆ ಹೋಲುತ್ತವೆ. ಭಾರತದ ಬಹುತೇಕ ಸಾರ್ಸ್ ಸಿಒವಿ-2 ವೈರಾಣು ಯುರೋಪ್, ಮಧ್ಯ ಪ್ರಾಚ್ಯ, ದಕ್ಷಿಣ ಏಷ್ಯಾ ಮತ್ತು ಒಷಿಯಾನಿಯಾ ವಲಯದಲ್ಲಿ ಹುಟ್ಟಿದ್ದು ಎನ್ನುವುದನ್ನು ಈ ಫಲಿತಾಂಶ ತೋರಿಸುತ್ತದೆ ಎಂದು ಐಐಎಸ್​ಸಿ ಸಂಶೋಧಕರು ಹೇಳಿದ್ದಾರೆ.

ಆಗಸ್ಟ್​ನಲ್ಲೇ ವ್ಯಾಪಿಸಿತ್ತು!

ಕರೊನಾ ವೈರಸ್ 2019ರ ಆಗಸ್ಟ್​ನಲ್ಲೇ ಚೀನಾದ ವುಹಾನ್​ನಲ್ಲಿ ಹಬ್ಬಿರಬಹುದು ಎಂದು ಹಾರ್ವರ್ಡ್ ಮೆಡಿಕಲ್ ಸ್ಕೂಲ್​ನ ಸಂಶೋಧನೆಯೊಂದು ಅಭಿಪ್ರಾಯಪಟ್ಟಿದೆ. ಆದರೆ ಚೀನಾ ಇದನ್ನು ಬಲವಾಗಿ ಖಂಡಿಸಿದೆ. ಆಸ್ಪತ್ರೆಗಳಿಗೆ ಜನರ ಭೇಟಿಯ ಉಪಗ್ರಹ ಚಿತ್ರಗಳು ಮತ್ತು ಸರ್ಚ್ ಎಂಜಿನ್ ಡೇಟಾ ಆಧಾರದಲ್ಲಿ ಈ ಅಧ್ಯಯನ ನಡೆಸಲಾಗಿದೆ. 2019ರ ಅಂತ್ಯ ಭಾಗದಲ್ಲಿ ರೋಗ ಕಾಣಿಸಿಕೊಂಡ ವುಹಾನ್​ನ ಆಸ್ಪತ್ರೆಯ ರ್ಪಾಂಗ್ ಸ್ಥಳಗಳ ಚಿತ್ರಗಳು ಮತ್ತು ‘ಕೆಮ್ಮು’ ಮತ್ತು ‘ಭೇದಿ’ಗೆ ಸಂಬಂಧಿಸಿದ ಮಾಹಿತಿ ಬಗ್ಗೆ ಜನರು ಜಾಲತಾಣಗಳಲ್ಲಿ ನಡೆಸಿದ ಹುಡುಕಾಟಗಳ ಡೇಟಾಗಳನ್ನು ಇಟ್ಟುಕೊಂಡು ಮೆಡಿಕಲ್ ಸ್ಕೂಲ್ ಸಂಶೋಧನೆ ನಡೆಸಿದೆ. ಹೌನಾನ್ ಮೀನು ಮಾರುಕಟ್ಟೆಯಲ್ಲಿ ವೈರಸ್ ಪತ್ತೆಯಾಗುವುದಕ್ಕೂ ಮುನ್ನವೇ ಈ ವೈರಸ್ ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಬಲವಾದ ಪುರಾವೆಗಳಿವೆ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ. ಚೀನಾ ಈ ವಿಚಾರವನ್ನು ಬಲವಾಗಿ ತಳ್ಳಿಹಾಕಿದೆ. ‘ಇದು ಅತ್ಯಂತ ಹಾಸ್ಯಾಸ್ಪದ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ಹುವಾ ಚುನ್​ಯಿುಂಗ್ ಟೀಕಿಸಿದರು.