ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರ ವಾಗಿ ಪಾಕಿಸ್ತಾನ ವಿರುದ್ಧದ ಕಠಿಣ ಕ್ರಮ ಸಲುವಾಗಿ ಸ್ಥಗಿತ ಗೊಳಿಸಲಾಗಿರುವ ಸಿಂಧು ಜಲ ಒಪ್ಪಂದವನ್ನು ಎಂದಿಗೂ ಪುನರ್ ಸ್ಥಾಪಿಸಲಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ನೆರೆರಾಷ್ಟ್ರವು ಈ ಒಪ್ಪಂದದ ನಿಯಮ ಗಳನ್ನು ಉಲ್ಲಂಘಿಸಿದೆ ಮತ್ತು ಅದು ನೀರಿನ ಕೊರತೆಯಿಂದ ಬಳಲಿದೆ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲಾಗುವುದಿಲ್ಲ, ಆದರೆ ಅದನ್ನು ಸ್ಥಗಿತಗೊಳಿಸುವ ಹಕ್ಕನ್ನು ನಾವು ಹೊಂದಿದ್ದು, ಸ್ಥಗಿತ ಗೊಳಿಸಿ ದ್ದೇವೆ. ಎರಡೂ ರಾಷ್ಟ್ರಗಳ ಶಾಂತಿ ಹಾಗೂ ಪ್ರಗತಿಗಾಗಿ ಎಂದು ಒಪ್ಪಂದದ ಪೀಠಿಕೆಯಲ್ಲಿ ಉಲ್ಲೇಖಿಸಲಾಗಿದೆ. ಅದನ್ನೇ ಉಲ್ಲಂಘಿಸಿದ ಮೇಲೆ ರಕ್ಷಿಸಲು ಏನೂ ಉಳಿದಿಲ್ಲ, ಆ ಒಪ್ಪಂದವನ್ನು ಪುನಃ ಸ್ಥಾಪಿಸುವುದಿಲ್ಲ ಎಂದು ಷಾ ಹೇಳಿದ್ದಾರೆ. ಭಾರತ ತನಗೆ ನ್ಯಾಯಯುತವಾಗಿ ಸಿಗಬೇಕಾದ ನೀರನ್ನು ಬಳಸಲಿದೆ. ಪಾಕ್ಗೆ ಹರಿಯಬೇಕಾದ ನೀರನ್ನು ನಾವು ಕಾಲುವೆ ನಿರ್ವಿುಸಿ ರಾಜಸ್ಥಾನಕ್ಕೆ ಹರಿಸಲಿದ್ದೇವೆ. ಪಾಕಿಸ್ತಾನವು ನೀರಿನ ಕೊರತೆಯಿಂದ ಬಳಲಿದೆ ಎಂದು ಷಾ ತಿಳಿಸಿದ್ದಾರೆ.
ಮಾನದಂಡ ಉಲ್ಲಂಘನೆ: ಪಾಕಿಸ್ತಾನವು ಬ್ಯಾಲಿಸ್ಟಿಕ್ ಕ್ಷಿಪಣಿ ಅಭಿವೃದ್ಧಿಯಲ್ಲಿ ತೊಡಗಿರುವ ಮೂಲಕ ಅಂತಾರಾಷ್ಟ್ರೀಯ ಮಾನದಂಡಗಳನ್ನು ಉಲ್ಲಂಘಿಸುತ್ತಿದೆ ಎಂದು ಫೈನಾನ್ಸಿಯಲ್ ಆಕ್ಷನ್ ಟಾಸ್ಕ್ ಫೋರ್ಸ್(ಎಫ್ಎಟಿಎಫ್) ಹೇಳಿದೆ.