ನ್ಯೂಸ್

ನಿಜಾಮುದ್ದೀನ್​ ಪ್ರಾರ್ಥನಾ ಮಂದಿರದಿಂದ ಬಿಜ್ನೋರ್​ ಮಸೀದಿಗೆ ಹೋಗಿ ಅಡಗಿದ್ದ 8 ವಿದೇಶಿಗರ ಪತ್ತೆ; ಮೌಲ್ವಿ ಸೇರಿ ಐವರ ವಿರುದ್ಧ ಕೇಸ್​

ಬಿಜ್ನೋರ್​: ದೆಹಲಿ ನಿಜಾಮುದ್ದೀನ್​ ಮರಕಜ ಮಸೀದಿಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು, ನಂತರ ಉತ್ತರ ಪ್ರದೇಶದ ಬಿಜ್ನೋರ್​ನಲ್ಲಿರುವ ಜಮುವಾಲಿ ಮಸೀದಿಗೆ ತೆರಳಿ, ಅಲ್ಲಿಯೇ ವಾಸ್ತವ್ಯ ಹೂಡಿದ್ದ 8 ಇಂಡೋನೇಷಿಯನ್​ ಮುಸ್ಲಿಮರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಿಜಾಮುದ್ದೀನ್​ ಜಮಾತೆ ಮಸೀದಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರಲ್ಲಿ 8 ಮಂದಿ ಕರೊನಾದಿಂದ ಮೃತಪಟ್ಟಿದ್ದಾರೆ. ಇಂದು 24 ಜನರಲ್ಲಿ ಮತ್ತೆ ಸೋಂಕು ದೃಢಪಟ್ಟಿದೆ. ಆ ಸಭೆಯಲ್ಲಿ ಪಾಲ್ಗೊಂಡವರು ಅವರೇ ಬಂದು ತಿಳಿಸಿ. ಕ್ವಾರಂಟೈನ್​ಗೆ ಒಳಪಡಿ ಸರ್ಕಾರ ಸೂಚನೆ ನೀಡಿದ್ದರೂ ಸಹ ಅದನ್ನು ಲೆಕ್ಕಿಸದೆ ಮಸೀದಿಯ ಕಟ್ಟಡದಲ್ಲಿ ಈ ಎಂಟು ಮಂದಿ ಇದ್ದರು. ಅವರಿಗೆಲ್ಲ ಆಶ್ರಯ ನೀಡಿದ ಆರೋಪದಡಿ ಪೋಲೀಸರು ಬಿಜ್ನೋರ್​ ಮಸೀದಿಯ ಮೌಲ್ವಿ ಸೇರಿ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಲಖನೌನ ಕೈಸರ್​ಬಾಘ್​ನಲ್ಲಿರುವ ಮಾರ್ಕ್​ಜಿ ಮಸೀದಿಯಲ್ಲಿ ಕಿರ್ಗಿಸ್ತಾನ ಮತ್ತು ಕಜಕಿಸ್ತಾನ ಸೇರಿ ಕೆಲವು ವಿದೇಶಗಳ ಮುಸ್ಲಿಮರಿಗೆ ಮಾ.13ರಿಂದಲೂ ಆಶ್ರಯ ನೀಡಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ವರದಿಯ ಬಳಿಕ ಪೊಲೀಸರು ಫುಲ್​ ಅಲರ್ಟ್​ ಆಗಿದ್ದಾರೆ. ಉತ್ತರ ಪ್ರದೇಶದ ಅನೇಕ ಮಸೀದಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬಾಂಗ್ಲಾದೇಶದ 17 ಮುಸ್ಲಿಮರು ಯುಪಿಯ ಮಡಿಯಾನ್​ ಮಸೀದಿಯಲ್ಲಿ ಪತ್ತೆಯಾಗಿದ್ದಾರೆ.

ಮಹಾರಾಷ್ಟ್ರದ ಅಹ್ಮದ್​ನಗರದ ಮಸೀದಿಯಲ್ಲಿ 10 ಮಂದಿ, ಬಿಹಾರದ ಪಾಟ್ನಾದ ಮಸೀದಿಯೊಂದರಲ್ಲಿ 12 ವಿದೇಶಿ ಮುಸ್ಲಿಮರು ಅಡಗಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿತ್ತು. (ಏಜೆನ್ಸೀಸ್​)