ನವದೆಹಲಿ: ಮುಂದಿನ ತಲೆಮಾರಿನ (ನೆಕ್ಸ್ಟ್ ಜನರೇಷನ್) ಸಮರ ವಿಮಾನದ ಇಂಜಿನ್ಗಳನ್ನು ಅಭಿವೃದ್ಧಿಪಡಿಸಲು ಫ್ರಾನ್ಸ್ನೊಂದಿಗೆ 61,000 ಕೋಟಿ ರೂಪಾಯಿಗಳ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲು ಭಾರತ ನಿರ್ಧರಿಸಿದೆ. ‘ಮೇಕ್ ಇನ್ ಇಂಡಿಯಾ’ ಯೋಜನೆಯನ್ನು ಸದೃಢಗೊಳಿಸುವುದು ಹಾಗೂ ದೀರ್ಘಾವಧಿಯಿಂದ ನಡೆದು ಬಂದಿರುವ ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಇದರ ಗುರಿಯಾಗಿದೆ.ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (ಎಎಂಸಿಎ)ನಂಥ ಭವಿಷ್ಯದ ಯುದ್ಧ ವಿಮಾನಗಳಿಗೆ ಶಕ್ತಿಯೊದಗಿಸುವ ಹೊಸ 120ಕಿಲೋನ್ಯೂಟನ್ (ಕೆಎನ್) ಇಂಜಿನ್ಗಳ ವಿನ್ಯಾಸ ಮತ್ತು ನಿಮಾಣಕ್ಕೆ ಈ ಯೋಜನೆ ಗಮನ ಕೇಂದ್ರೀಕರಿಸಲಿದೆ. ಭಾರತದ ಎಲ್ಲ ಹಾಲಿ ಫೈಟರ್ ಜೆಟ್ಗಳ ಇಂಜಿನ್ಗಳು ವಿದೇಶಿ ನಿರ್ವಿುತವಾಗಿದ್ದು ದೀರ್ಘಾವಧಿ ನಿರ್ವಹಣೆ ವೆಚ್ಚ ಸಹಿತ ಅಪಾರ ಆರ್ಥಿಕ ಹೊರೆಯಾಗುತ್ತಿದೆ.
ರಕ್ಷಣಾ ಸಚಿವಾಲಯ ಅಸ್ತು
ಫ್ರೆಂಚ್ ಕಂಪನಿ ಸಫ್ರಾನ್ ಮತ್ತು ಅಮೆರಿಕದ ರೋಲ್ಸ್ ರಾಯ್ಸ್ ಪ್ರಸ್ತಾಪನೆಗಳನ್ನು ಸಮಗ್ರವಾಗಿ ಪರಿಶೀಲಿಸಿದ ರಕ್ಷಣಾ ಇಲಾಖೆ, ಫ್ರಾನ್ಸ್ ಜತೆ ಕೈಜೋಡಿಸಲು ಶಿಫಾರಸು ಮಾಡಿದೆ. ತಂತ್ರಜ್ಞಾನ ವರ್ಗಾವಣೆ ಮತ್ತು ಕ್ಲಪ್ತ ಸಮಯದಲ್ಲಿ ನೀಡುವಿಕೆ ಕುರಿತ ಸಫ್ರಾನ್ ಪ್ರಸ್ತಾಪನೆಗಳು ಭಾರತದ ಹಿತಾಸಕ್ತಿಗೆ ಪೂರಕವಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಪ್ರಸ್ತಾಪವನ್ನು ದೃಢವಾಗಿ ಬೆಂಬಲಿಸಿದ್ದಾರೆ ಎನ್ನಲಾಗಿದೆ. ಸಿಂಗ್, ನಿರ್ದಿಷ್ಟವಾಗಿ ಇಂಜಿನ್ ಉತ್ಪಾದನೆ ಸಹಿತ ರಕ್ಷಣಾ ಕ್ಷೇತ್ರದಲ್ಲಿ ದೇಶೀಯ ಸಾಮರ್ಥ್ಯ ವೃದ್ಧಿಯ ಕಟ್ಟಾ ಪ್ರತಿಪಾದಕರಾಗಿದ್ದಾರೆ.
ವಿಫಲ ಕಾವೇರಿ ಯೋಜನೆ
ಇಂಥ ಇಂಜಿನ್ಗಳನ್ನು ಅಭಿವೃದ್ಧಿ ಪಡಿಸುವುದು ಸುಲಭದ ಕೆಲಸವಲ್ಲ. ಕೆಲವು ದೇಶಗಳು ಮಾತ್ರವೇ ಈ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡಿವೆ. ಭಾರತ ಹಿಂದೆ ‘ಕಾವೇರಿ’ ಯೋಜನೆಯಡಿ ತನ್ನದೇ ಸ್ವಂತ ಫೈಟರ್ ಜೆಟ್ ಇಂಜಿನ್ಗಳನ್ನು ನಿರ್ವಿುಸಲು ನಡೆಸಿದ ಪ್ರಯತ್ನ ಕೈಗೂಡಿರಲಿಲ್ಲ.