ನ್ಯೂಸ್

ಪಾಕ್​ ಸೇನೆಯೂ ಚುರುಕಾಗಿದೆ- ಐಎಸ್​ಐ ಕೇಂದ್ರ ಕಚೇರಿಯಲ್ಲಿ ಸೇನಾ ಮುಖ್ಯಸ್ಥರ ಸಭೆ

ಇಸ್ಲಾಮಾಬಾದ್​: ಚೀನಾ-ಭಾರತ ನಡುವೆ ಲಡಾಖ್​ ಗಡಿ ಸಂಘರ್ಷ ತೀವ್ರಗೊಂಡಿರುವ ಬೆನ್ನಿಗೆ ಪಾಕಿಸ್ತಾನ ಸೇನೆಯ ಚಟುವಟಿಕೆಯೂ ತೀವ್ರಗೊಂಡಿದೆ. ಪಾಕ್​ ಸೇನೆಯೂ ವಿವಿಧ ಚಟುವಟಿಕೆಗಳಲ್ಲಿ ನಿರತವಾಗಿದ್ದು ಅಚ್ಚರಿ ಎಂಬಂತೆ ಐಎಸ್​ಐ ಕೇಂದ್ರ ಕಚೇರಿಯಲ್ಲಿ ಪಾಕ್ ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರು ಜನರಲ್​ ಬೆಜ್ವಾ ಜತೆಗೆ ಹಾಜರಿದ್ದರು. ಸೇನಾ ಮುಖ್ಯಸ್ಥ ಜನರಲ್ ಬೆಜ್ವಾ ಐಎಸ್​ಐ ಕೇಂದ್ರ ಕಚೇರಿಗೆ ಸಾಮಾನ್ಯವಾಗಿ ಈ ರೀತಿ ಹೋಗುವುದಿಲ್ಲ. ಅವರ ಜತೆಗೆ ಲಷ್ಕರ್ ನಾಯಕರು ಕೂಡ ಇದ್ದರು. ಈ ರೀತಿ ಹೋಗಿದ್ದಾರೆ ಎಂದರೆ ಏನೋ ಮಹತ್ವದ ಕಾರ್ಯಾಚರಣೆ ಇದೆ ಎಂದೇ ಅರ್ಥ ಎಂದು ಮೂಲಗಳನ್ನು ಉಲ್ಲೇಖಿಸಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ರೇಡಿಯೋ ಪಾಕಿಸ್ತಾನ್ ವರದಿ ಪ್ರಕಾರ, ಐಎಸ್​ಐ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜನರಲ್ ಬೆಜ್ವಾ ಹೊರತಾಗಿ, ಜಾಯಿಂಟ್ ಚೀಫ್ಸ್​ ಆಫ್ ಸ್ಟಾಫ್ ನದೀಮ್ ರಾಜಾ, ನೇವಿ ಚೀಫ್​ ಅಡ್ಮಿರಲ್​ ಝಫರ್ ಮಹ್​ಮೂದ್ ಅಬ್ಬಾಸಿ, ಏರ್​ಫೋರ್ಸ್ ಚೀರ್ಫ ಮುಜಾಹಿದ್ ಅನ್ವರ್ ಖಾನ್​ ಇದ್ದರು. ಅವರನ್ನು ಐಎಸ್​ಐ ಮುಖ್ಯಸ್ಥ ಲೆಫ್ಟಿನೆಂಟ್​ ಜನರಲ್​ ಫೈಜ್ ಹಮೀದ್​ ಬರಮಾಡಿಕೊಂಡು ಸುದೀರ್ಘ ಮಾತುಕತೆ ನಡೆಸಿದರು.

ನ್ಯೂಯಾರ್ಕ್​ ಟೈಮ್ಸ್​ನ ಪಾಕ್ ಬ್ಯೂರೋ ಮುಖ್ಯಸ್ಥ ಸಲ್ಮಾನ್ ಮಸೂದ್ ಫೌಜ್​ ಹೇಳುವ ಪ್ರಕಾರ, ಸೇನಾ ಮುಖ್ಯಸ್ಥ ಐಎಸ್​ಐ ಕೇಂದ್ರ ಕಚೇರಿಗೆ ಬರುತ್ತಾರೆ ಎಂಬುದು ಸಾಮಾನ್ಯ ಸುದ್ದಿಯಲ್ಲ. ಇದು ಅಸಹಜವಾಗಿದ್ದು, ಈ ರೀತಿ ಹಿಂದೆಂದೂ ಆಗಿರಲಿಲ್ಲ. ಬಾಲಾಕೋಟ್​ ಬಿಕ್ಕಟ್ಟು ಏರ್ಪಟ್ಟ ಬಳಿಕ ಭಾರತ-ಪಾಕ್​ ನಡುವೆ ಉದ್ವಿಗ್ನತೆ ಇತ್ತು. ಆಗಲೂ ಈ ರೀತಿ ಇವರ್ಯಾರೂ ಐಎಸ್​ಐ ಕೇಂದ್ರ ಕಚೇರಿಗೆ ಹೋಗಿರಲಿಲ್ಲ. ಮಂಗಳವಾರದ ಸಭೆ ಅಚ್ಚರಿ ಹುಟ್ಟಿಸುವಂಥದ್ದು. (ಏಜೆನ್ಸೀಸ್)