ನ್ಯೂಸ್

ಇಂಡೋ-ಕೆನಡಿಯನ್​ ಸಂಸದೆಗೂ ಕರೊನಾ ಸೋಂಕು: ಕೋವಿಡ್​-19 ತಗುಲಿದ ಮೊದಲ ಕೆನಡಾ ರಾಜಕಾರಣಿ

ನವದೆಹಲಿ: ಇಂಡೋ-ಕೆನಡಿಯನ್​ ರಾಜಕಾರಣಿಯೊಬ್ಬರಿಗೆ ಕರೊನಾ ವೈರಸ್​ ಸೋಂಕು ತಗುಲಿದೆ. ಕೋವಿಡ್​-19 ಪಾಸಿಟಿವ್​ ಫಲಿತಾಂಶ ಬಂದಂತಹ ಕೆನಡಾ ಸಂಸತ್ತಿನ ಮೊದಲ ಸದಸ್ಯೆಯಾಗಿದ್ದಾರೆ.

ಸೋಂಕಿತೆ ಕಮಲ್​ ಖೆರಾ(31) ಪಶ್ಚಿಮ ಬ್ರಾಂಪ್ಟನ್​ ಕ್ಷೇತ್ರದ ಸಂಸದೆಯಾಗಿದ್ದಾರೆ. ಗ್ರೇಟರ್​ ಟೊರೊಂಟೋ ಏರಿದಲ್ಲಿರುವ ಪೀಲ್​ ಮೆಮೋರಿಯಲ್ ಹಾಸ್ಪಿಟಲ್​ನಿಂದ ಬಂದ ಪರೀಕ್ಷಾ ವರದಿಯಲ್ಲಿ ಸೋಂಕು ಇರುವುದು ಧೃಡವಾಗಿದೆ.​ ಖೆರಾ ಅವರು ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೆಯೋ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿದ್ದಾರೆ.

ಟ್ವೀಟ್​ ಮೂಲಕ ಸೋಂಕು ತಗುಲಿರುವುದನ್ನು ಖೆರಾ ಘೋಷಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಜಸ್ಟಿನ್​ ಟ್ರುಡೆಯೋ, ಆದಷ್ಟು ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ. ಟ್ರುಡೆಯೋ ಪತ್ನಿ ಸೋಫಿಯಿ ಗ್ರೆಗೊಯರ್​ರಿಗೂ ಈ ಮುಂಚೆಯೇ ಕರೊನಾ ಪಾಟಿಸಿವ್​ ಫಲಿತಾಂಶ ಬಂದಿದ್ದರಿಂದ ಕ್ವಾರಂಟೈನ್​ನಲ್ಲಿದ್ದಾರೆ.

ರೋಗ ಲಕ್ಷಣಗಳ ಬಗ್ಗೆ ವಿವರಿಸಿರುವ ಖೆರಾ, ಶನಿವಾರ ರಾತ್ರಿ ಜ್ವರ ರೀತಿಯ ಕಾಯಿಲೆ ಆರಂಭವಾಯಿತು. ತಕ್ಷಣ ಪ್ರತ್ಯೇಕವಾಗಿ ಇರುವುದನ್ನು ಆರಂಭಿಸಿದೆ. ಈಗಲೂ ಕೂಡ ನಾನು ಅದೇ ರೀತಿಯ ರೋಗ ಲಕ್ಷಣಗಳನ್ನು ಅನುಭವಿಸುತ್ತಿದ್ದೇನೆ. ಅನೇಕ ಕೆನಡಿಯನ್ನರು ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಮಹಾಮಾರಿಯು ಸಾಕಷ್ಟು ಕುಟುಂಬಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದ್ದಾರೆ.

ಮೂಲತಃ ನರ್ಸ್​ ಆಗಿದ್ದ ಖೆರ್​, ಕೆನಡಾದಲ್ಲಿ ನರ್ಸ್​ಗಳ ಕೊರತೆಯ ಕಾರಣದಿಂದಾಗಿ ತಾವೇ ಮತ್ತೆ ನರ್ಸ್​ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರಿಗೆ ಹೇಗೆ ಸೋಂಕು ತಗುಲಿತು ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಲಂಡನ್​ಗೆ ಭೇಟಿ ನೀಡಿದ್ದರು ಎಂಬುದು ಮಾತ್ರ ತಿಳಿದುಬಂದಿದೆ. ಖೆರ್​ ಮೂಲತಃ ಭಾರತದ ಪಂಜಾಬ್​ ಮೂಲದವರು. (ಏಜೆನ್ಸೀಸ್​)