ಬೆಂಗಳೂರು: ಕೆರೆಗಳ ಸಂರಕ್ಷಣೆ ಸಂಬಂಧ ಕರ್ತವ್ಯ ಪಾಲಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆಯ ಭಾಗವಾಗಿ ಲೋಕಾಯುಕ್ತರು, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ ಮತ್ತು ಬಿ.ವೀರಪ್ಪ ಅವರು ನಗರದ ವಿಭೂತಿಕೆರೆ ಮತ್ತು ದೊಡ್ಡನೆಕ್ಕುಂದಿ ಕೆರೆಗಳಿಗೆ ಮಂಗಳವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಬಿಬಿಎಂಪಿ, ಮಾಲಿನ್ಯ ನಿಯಂತ್ರಣ ಮಂಡಳಿ, ಕೆರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು.
ವಿಭೂತಿಕೆರೆಯಲ್ಲಿ ನೀರು ಸಂಗ್ರಹವಾಗದೇ ಇರುವುದನ್ನು ಗಮನಿಸಿದ ಲೋಕಾಯುಕ್ತರು ಆ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಮಳೆ ಕೊರತೆಯಿಂದ ನೀರು ಸಂಗ್ರಹವಾಗಿಲ್ಲ ಎಂದು ಅಧಿಕಾರಿಗಳು ಉತ್ತರಿಸಿದರು. ಆದರೆ ಸ್ಥಳೀಯರು, ಕೆರೆಗೆ ನೀರು ಹರಿದುಬರುವ ರಾಜಕಾಲುವೆ ಮತ್ತು ಮಳೆನೀರಿನ ಕಾಲುವೆಗಳು ಮುಚ್ಚಿಹೋಗಿವೆ. ಒತ್ತುವರಿ ನಡೆದಿದೆ ಎಂದು ಲೋಕಾಯುಕ್ತರಿಗೆ ಮಾಹಿತಿ ನೀಡಿದರು. ಒಂದು ವೇಳೆ ಕೆರೆ ತುಂಬಿದರೆ ಸ್ಥಳೀಯವಾಗಿ ನೀರಿನ ಸರಬರಾಜು ಮಾಡುವ ವಾಟರ್ ಟ್ಯಾಂಕರ್ ಮಾಲೀಕರಿಗೆ ಬಿಜಿನೆಸ್ ಇರುವುದಿಲ್ಲ ಹೀಗಾಗಿ ಕೆರೆ ತುಂಬಿಸುವುದಿಲ್ಲ ಎಂದು ಸ್ಥಳೀಯರು ಲೋಕಾಯುಕ್ತರ ಬಳಿ ಅಳಲು ತೋಡಿಕೊಂಡರು.
ಕಾಲುವೆಗಳು ಮುಚ್ಚಿಹೋಗಿರುವುದು ಮತ್ತು ಕೆರೆಯ ಅಂಗಳದಲ್ಲಿ ಕಟ್ಟಡಗಳು ನಿರ್ಮಾಣವಾಗಿರುವುದನ್ನು ಕಂಡ ಲೋಕಾಯುಕ್ತರು, ಕೆರೆಯ ಜಾಗ ಎಷ್ಟು ಒತ್ತುವರಿಯಾಗಿದೆ ಎಂಬುದನ್ನು ಪತ್ತೆ ಮಾಡಲು ಸರ್ವೆ ನಡೆಸಿ, ೨೦ ದಿನಗಳಲ್ಲಿ ವರದಿ ನೀಡಿ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಕೆರೆಯ ಅಂಗಳದಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ಒಡೆದು ಹಾಕಲು ತಕ್ಷಣವೇ ಕ್ರಮ ತೆಗೆದುಕೊಳ್ಳಿ. ಎಲ್ಲ ಒತ್ತುವರಿಯನ್ನು ಒಂದು ತಿಂಗಳ ಒಳಗೆ ತೆರವು ಮಾಡಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಕೆರೆ ಪ್ರದೇಶದಲ್ಲಿ ಭದ್ರತೆ ಇಲ್ಲ ಎಂದು ಸಾರ್ವಜನಿಕರು ದೂರಿದಾಗ, ಬೆಳಿಗ್ಗೆ ಮತ್ತು ಸಂಜೆ ಗಸ್ತು ಹಾಕುವಂತೆ ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.
ದೊಡ್ಡನೆಕ್ಕುಂದಿ ಕೆರೆಯ ಅಭಿವೃದ್ಧಿಗೆ ೧೪ ಕೋಟಿ ರೂ. ಬಿಡುಗಡೆಯಾಗಿದ್ದು, ಹಣವನ್ನು ಯಾವ ಕಾರ್ಯಗಳಿಗೆ ವೆಚ್ಚ ಮಾಡಲಾಗಿದೆ ಎಂಬುದರ ವಿವರ ಸಲ್ಲಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ಲೋಕಾಯುಕ್ತರು ಸೂಚಿಸಿದರು.
ಕೆರೆಯ ಸುಮಾರು ೨ ಎಕರೆ ೬ ಗುಂಟೆ ಒತ್ತುವರಿಯಾಗಿದೆಯೆಂದು ಅಧಿಕಾರಿಗಳು ಮಾಹಿತಿ ನೀಡಿದಾಗ, ಒತ್ತುವರಿ ತೆರವಿಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಿ ಎಂದರು.