ತುಮಕೂರು ಹೊರವಲಯದ ಅಂತರಸನಹಳ್ಳಿ ರಾಗಿ ಖರೀದಿ ಕೇಂದ್ರದ ಮುಂದೆ ವಾರದಿಂದಲೂ ಸಾಲುಗಟ್ಟಿ ನಿಂತಿರುವ ರೈತರ ಟ್ರ್ಯಾಕ್ಟರ್‌ಗಳು. 
ನ್ಯೂಸ್

ರಾಗಿ ಖರೀದಿಸಲು ಅಧಿಕಾರಿಗಳ ರಾಗ; ಗುಣಮಟ್ಟದ ನೆಪ ಹೇಳಿ ವಾರಗಟ್ಟಲೆ ಕಿರುಕುಳ

ತುಮಕೂರು/ ತುರುವೇಕೆರೆ:  ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯಲ್ಲಿ ಆರಂಭವಾಗಿರುವ ಎಂಟು ರಾಗಿ ಖರೀದಿ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿದ್ದು, ಗುಣಮಟ್ಟದ ನೆಪದಲ್ಲಿ ರೈತರನ್ನು ವಾರಗಟ್ಟಲೆ ಕಾಯಿಸಲಾಗುತ್ತಿದೆ.

ಜಿಲ್ಲೆಯಲ್ಲಿ 11 ಕೇಂದ್ರಗಳಿವೆ. ರೈತರಿಗೆ ಸರಿಯಾಗಿ ಮಾಹಿತಿ ನೀಡದ ಕಾರಣ ಸಾವಿರಾರು ಟ್ರ್ಯಾಕ್ಟರ್, ಲಾರಿಗಳು ಮಾರುಕಟ್ಟೆಗಳ ಮುಂದೆ ಜಮಾಯಿಸಿವೆ.

ಗುಬ್ಬಿ, ಚಿಕ್ಕನಾಯಕನಹಳ್ಳಿ, ಕುಣಿಗಲ್, ತಿಪಟೂರು, ತುಮಕೂರು, ತುರುವೇಕೆರೆ, ಹುಳಿಯಾರು ಹಾಗೂ ತುಮಕೂರಿನ ಖರೀದಿ ಕೇಂದ್ರದಲ್ಲಿ ಕಳೆದೆರಡು ವಾರದಿಂದಲೂ ಖರೀದಿ ಆರಂಭವಾಗಿದ್ದು, ರೈತರು ರಾತ್ರಿ, ಹಗಲೆನ್ನದೆ ಕಾದು ರಾಗಿ ಮಾರಬೇಕಿದೆ.

ಎಂಎಸ್‌ಪಿ ಯೋಜನೆಯಡಿ ಕ್ವಿಂಟಾಲ್‌ಗೆ 3630 ರೂ.ಗಳಿಗೆ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದ್ದರೂ, ನೋಂದಣಿ ಮಾಡಿರುವ ರೈತರಿಗೆ ನಿರ್ದಿಷ್ಟ ದಿನದಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡದಿರುವುದು ಅವಾಂತರಕ್ಕೆ ಕಾರಣವಾಗಿದೆ.

ಖರೀದಿ ಕೇಂದ್ರಗಳಲ್ಲಿ ಎಫ್‌ಎಕ್ಯೂ ಗುಣಮಟ್ಟದ ರಾಗಿ ಖರೀದಿ ಮಾಡಬೇಕು ಎಂಬ ಸೂಚನೆಯಿಟ್ಟುಕೊಂಡು ಚೀಲದಿಂದ ಮತ್ತೊಂದು ಚೀಲಕ್ಕೆ ವರ್ಗಾಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದು, ಸಿಬ್ಬಂದಿ ಕೊರತೆಯಿಂದ ರೈತರಿಗೆ ತೊಂದರೆ ತಂದೊಡ್ಡಿದೆ.

ಖರೀದಿ ಕೇಂದ್ರಗಳಲ್ಲಿರುವ ಸಿಬ್ಬಂದಿ ಹಾಗೂ ಗ್ರೇಡರ್‌ಗಳಿಗೆ ಖರೀದಿ ಪ್ರಕ್ರಿಯೆ ಕುರಿತಂತೆ ಸೂಕ್ತ ಸಲಹೆ, ತರಬೇತಿ ನೀಡಿ ಪಾರದರ್ಶಕವಾಗಿ ಕೆಲಸ ನಡೆಸಲು ಅಧಿಕಾರಿಗಳು ಕ್ರಮವಹಿಸಬೇಕಿದೆ.

ಚಿಕ್ಕನಾಯಕನಹಳ್ಳಿ, ಗುಬ್ಬಿ, ಕುಣಿಗಲ್, ಮಧುಗಿರಿ, ಶಿರಾ, ತಿಪಟೂರು, ತುಮಕೂರು, ತುರುವೇಕೆರೆ ತಾಲೂಕುಗಳಲ್ಲಿ 63408 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ರೈತರಿಂದ 917821.5 ಕ್ವಿಂಟಾಲ್ ರಾಗಿ ಖರೀದಿಗೆ ಅವಕಾಶವಿದ್ದು, ಇನ್ನೂ ಶೇ.10 ಖರೀದಿ ಕೂಡ ಆಗದಿರುವುದು ರೈತರಲ್ಲಿ ಆತಂಕ ಮೂಡಿದೆ.

ಕ್ಯಾಂಟರ್‌ಗಳಲ್ಲಿ ತರಬೇಡಿ... ರಾಗಿ ಖರೀದಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿರುವ ಅಧಿಕಾರಿಗಳು ಗೊಂದಲದ ಆದೇಶ ನೀಡುತ್ತಿರುವುದು ರೈತರನ್ನು ಮತ್ತಷ್ಟು ಗೊಂದಲಕ್ಕೀಡುಮಾಡಿದೆ. ಮೇಲಧಿಕಾರಿಗಳ ಆದೇಶದಂತೆ ಫೆ.10ರಿಂದ ಟ್ರ್ಯಾಕ್ಟರ್ ಹೊರತುಪಡಿಸಿ ಕ್ಯಾಂಟರ್ ಗಾಡಿಗಳಲ್ಲಿ ರಾಗಿ ತರಬಾರದು ಎಂದು ಲಿಖಿತ ಸೂಚನೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಗುಣಮಟ್ಟ ಪರಿಶೀಲನೆ ಕಾರಣಕ್ಕೆ ಟ್ರ್ಯಾಕ್ಟರ್‌ನಲ್ಲಿ ಮಾತ್ರ ತರಬೇಕು ಎಂದು ಸೂಚಿಸಿರುವ ಅಧಿಕಾರಿಗಳ ಚಿಂತನೆಯೇ ಅನುಮಾನಕ್ಕೆ ಕಾರಣವಾಗಿದೆ, ಖರೀದಿ ಕೇಂದ್ರದಲ್ಲಿ ಅಗತ್ಯ ಸಿಬ್ಬಂದಿ ನೇಮಿಸಿಕೊಳ್ಳಲಾಗದ ವಾಹನ ಬದಲಾಯಿಸಿದಾಕ್ಷಣ ಆಗುವ ಬದಲಾವಣೆಗಳೇನು ಎಂದು ರೈತರು ಪ್ರಶ್ನಿಸಿದ್ದಾರೆ.

ಇರುವುದು ಒಂದೇ ಕೌಂಟರ್: ತುರುವೇಕೆರೆಯಲ್ಲಿ ರಾಗಿ ಖರೀದಿ ಕೇಂದ್ರ ಪ್ರಾರಂಭವಾಗಿ ವಾರಗಳೇ ಕಳೆದಿವೆ. ನೋಂದಾಯಿತ ರೈತರು ರಾಗಿ ಚೀಲಗಳನ್ನು ನಫೆಡ್ ಕೇಂದ್ರಕ್ಕೆ ಬಿಡುವ ದಿನಾಂಕದ ಟೋಕನ್ ನೀಡಲಾಗಿದ್ದು ಅದರಂತೆ ತಂದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಸಿಬ್ಬಂದಿ ಕೊರತೆಯಿಂದ ಒಂದೇ ಕೌಂಟರ್ ತೆರೆದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ. ದೂರದ ಊರುಗಳಿಂದ ಬಂದ ರೈತರು ನಿಗದಿತ ಅವಧಿ ಬರುವವರೆಗಾಗಿ ರಾಗಿ ಬಿಡಲು ಕಾಯುತ್ತಿದ್ದಾರೆ. ಊರುಗಳಿಗೆ ತೆರಳದೆ ಹಗಲು, ರಾತ್ರಿ ಚಳಿ, ಬಿಸಿಲೆನ್ನದೆ ಕಾಯುತ್ತಿದ್ದಾರೆ. ಎಪಿಎಂಸಿಯೊಳಗೆ ರಾಗಿ ತುಂಬಿದ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ರಸ್ತೆ ಬದಿಯಲ್ಲಿ ಸಾಲು: ತುರುವೇಕೆರೆ ತಾಲೂಕಿನ ಸುಮಾರು 13880 ರೈತರು ರಾಗಿ ಮಾರಲು ನೋಂದಣಿ ಮಾಡಿಕೊಂಡಿದ್ದು, ರಾಗಿ ತರಲು ರೈತರಿಗೆ ದಿನಾಂಕ ನಿಗದಿ ಮಾಡಲಾಗಿದೆ. ಆದರೆ ರೈತರು ತಾಮುಂದು ನಾಮುಂದು ಎಂಬಂತೆ ಟ್ರ್ಯಾಕ್ಟರ್‌ಗಳಲ್ಲಿ ರಾಗಿ ತಂದು ಎಪಿಎಂಸಿಯಿಂದ ಬಸ್ ಡಿಪೋ ತನಕ ದೆಬ್ಬೇಘಟ್ಟ ರಸ್ತೆ ಬದಿಯ ಎಡಭಾಗದಲ್ಲಿ ಸಾಲು ನಿಂತಿದ್ದಾರೆ.

ತುರುವೇಕೆರೆ ತಾಲೂಕಿನ 13880 ರೈತರು ರಾಗಿ ಖರೀದಿ ಕೇಂದ್ರದಲ್ಲಿ ಹೆಸರು ನೋಂದಾಯಿಸಿದ್ದು, ಸದ್ಯಕ್ಕೆ 1100 ರೈತರ ರಾಗಿ ಖರೀದಿ ಮಾಡಲಾಗಿದೆ. ಮಾರ್ಚ್ ಅಂತ್ಯದೊಳಗೆ ನೋಂದಾಯಿತ ರೈತರ ರಾಗಿ ಖರೀದಿಸಲಾಗುವುದು. }ಬಿ.ರವಿಕುಮಾರ್, ರಾಗಿ ಖರೀದಿ ಅಧಿಕಾರಿ ತುರುವೇಕೆರೆ ಅಧಿಕಾರಿಗಳು ಕೂಡಲೇ ಹೆಚ್ಚಿನ ಕೌಂಟರ್‌ಗಳನ್ನು ತೆರೆಯಬೇಕು. ಅಲ್ಲದೆ ರಾಗಿ ಖರೀದಿಸುವಲ್ಲಿಯೂ ವಿಳಂಬವಾಗುತ್ತಿದೆ. ಭಾಗಶಃ ರೈತರು ರಾಗಿ ಕೇಂದ್ರಕ್ಕೆ ರಾಗಿ ತರಲು ಟ್ರ್ಯಾಕ್ಟರ್ ಮತ್ತು ಡ್ರೈವರ್‌ಗಳಿಗೆ ಬಾಡಿಗೆ ಹಣ ನೀಡಿ ಬಂದಿದ್ದು ಇನ್ನೂ ಯಾವಾಗ ಅಧಿಕಾರಿಗಳು ರಾಗಿ ಬಿಡಲು ಕರೆಯುತ್ತಾರೆ ಎನ್ನುವ ಚಿಂತೆಯಿದೆ. ರೈತರಿಗೆ ತಂಗಲು ವ್ಯವಸ್ಥೆ ಮಾಡಿ ಮೂಲಸೌಲಭ್ಯ ಕಲ್ಪಿಸಬೇಕು. | ಶ್ರೀನಿವಾಸಗೌಡ ತುರುವೇಕೆರೆ ರೈತ ಸಂಘದ ಅಧ್ಯಕ್ಷ