ಆಂತರಿಕ ಸಮಸ್ಯೆಗಳಿಂದ ಹೈರಾಣಾಗಿ ಹೋಗಿರುವ ಪಾಕಿಸ್ತಾನ ಆ ಬಗ್ಗೆ ಗಮನ ನೀಡುವ ಬದಲು ವಿವಾದ, ಸಮಸ್ಯೆಗಳನ್ನೇ ಕೆದಕುತ್ತ ಇರುತ್ತದೆ. ಬೇಸಿಗೆ ಅವಧಿಯ ದುರುಪಯೋಗ ಪಡೆದು ಭಾರತದ ಗಡಿಯಲ್ಲಿ ಭಯೋತ್ಪಾದಕರನ್ನು ನುಸುಳಿಸಲು ಇನ್ನಿಲ್ಲದಂತೆ ಅದು ಯತ್ನಿಸುತ್ತಿದೆ. ಭಯೋತ್ಪಾದಕರೊಂದಿಗಿನ ಕಾರ್ಯಾಚರಣೆಯಲ್ಲಿ 48 ಗಂಟೆಗಳಲ್ಲೇ (ಮೇ 2ರಿಂದ 4) 8 ಯೋಧರು ಹುತಾತ್ಮರಾಗಿದ್ದರೆ, ಏಳು ಜನರು ಗಾಯಗಳನ್ನು ಅನುಭವಿಸಿದ್ದಾರೆ. ಇಂಥ ಕೃತ್ಯಗಳಿಗೆ ತಕ್ಕ ಉತ್ತರ ನೀಡಲು ಭಾರತ ಸಮರ್ಥವಾಗಿದೆ ಮತ್ತು ಭಾರತ ಹಿಂದೆಂದಿಗಿಂತಲೂ ಬಲಿಷ್ಠವಾಗಿದೆ ಎಂಬ ಸತ್ಯವನ್ನು ಪಾಕಿಸ್ತಾನ ಮರೆತಂತಿದೆ. ಇದರ ಕ್ಯಾತೆಗಳು ಒಂದೆರಡಲ್ಲ. ಭಾರತದ ಅವಿಭಾಜ್ಯ ಅಂಗವಾಗಿರುವ ಗಿಲ್ಗಿಟ್-ಬಾಲ್ಟಿಸ್ತಾನ್ದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಪಾಕ್ನ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಇದಕ್ಕೆ ಭಾರತ ತೀವ್ರ ಆಕ್ರೋಶ ಹೊರಹಾಕಿದೆ. ಅಕ್ರಮವಾಗಿ ವಶಪಡಿಸಿಕೊಂಡಿರುವ ಭಾರತದ ಪ್ರದೇಶವನ್ನು ತೆರವುಗೊಳಿಸುವಂತೆಯೂ ಸರ್ಕಾರ ಆಗ್ರಹಿಸಿದೆ.
‘ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳ ಸಹಿತ ಇಡೀ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿವೆ. ಕಾನೂನುಬಾಹಿರ ಮತ್ತು ಬಲವಂತವಾಗಿ ಆ ರಾಷ್ಟ್ರ ವಶಪಡಿಸಿ ಕೊಂಡಿರುವ ಪ್ರದೇಶಗಳ ವಿಚಾರದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ನ್ಯಾಯಾಂಗಕ್ಕೆ ಯಾವುದೇ ಅಧಿಕಾರವಿಲ್ಲ’ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟವಾದ ಮಾತುಗಳಲ್ಲಿ ತಿಳಿಸಿದೆ. 72,871 ಚದರ ಕಿಲೋಮೀಟರ್ ವ್ಯಾಪ್ತಿಯ ಗಿಲ್ಗಿಟ್-ಬಾಲ್ಟಿಸ್ತಾನ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ಕ್ಕಿಂತ ಐದೂವರೆ ಪಟ್ಟು ಹೆಚ್ಚು ವಿಶಾಲವಾಗಿದೆ. ಮೂರು ಆಡಳಿತಾತ್ಮಕ ವಿಭಾಗ ಹಾಗೂ 10 ಜಿಲ್ಲೆಗಳನ್ನು ಹೊಂದಿದೆ. ಪಾಕಿಸ್ತಾನ ಅಕ್ರಮ ಅತಿಕ್ರಮಣವನ್ನು ಸಮರ್ಥಿಸಿಕೊಳ್ಳಲು ಯತ್ನಿಸುತ್ತಿರುವುದು ಇದೇ ಮೊದಲೇನಲ್ಲ. ಅಲ್ಲದೆ, ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಬಗ್ಗೆಯೂ ಭಾರತ ತನ್ನ ಸ್ಪಷ್ಟ ನಿಲುವನ್ನು ತಿಳಿಸಿರುವ ಪರಿಣಾಮ, ಆ ದೇಶ ಪೇಚಾಡುವಂತೆ ಆಗಿದೆ. ಹಾಗಾಗಿಯೇ, ಹೊಸ ಮಾರ್ಗ ಅಥವಾ ಕ್ಯಾತೆಗಳ ಮೂಲಕ ವಿವಾದ ಸೃಷ್ಟಿಸಲು ಯತ್ನಿಸುತ್ತಿದೆ.
ಕರೊನಾ ಸಮಸ್ಯೆ ಪಾಕಿಸ್ತಾನದಲ್ಲೂ ಇದೆ. ಅದಕ್ಕೂ ಮುಂಚೆಯೇ ಹಳಿ ತಪ್ಪಿದ್ದ ಆ ದೇಶದ ಆರ್ಥಿಕತೆ ಮತ್ತಷ್ಟು ಹದಗೆಟ್ಟಿದೆ. ಅಲ್ಲಿನ ಅಲ್ಪಸಂಖ್ಯಾತರ ಮೇಲೆ ನಿರಂತರ ಶೋಷಣೆ, ದೌರ್ಜನ್ಯ ನಡೆಯುತ್ತಿದೆ. ಇದ್ಯಾವುದರ ಬಗ್ಗೆ ಕ್ರಮ ಕೈಗೊಳ್ಳದ ಪಾಕ್, ಇಂಥ ಹೊತ್ತಲ್ಲೂ ಭಯೋತ್ಪಾದನೆಯನ್ನು ರಫ್ತು ಮಾಡುತ್ತಿದೆ. ಈ ಬೆಳವಣಿಗೆಯೇ ಅದರ ಮಾನಸಿಕತೆ ಎಷ್ಟು ಮಾರಕ ಎಂಬುದನ್ನು ಸೂಚಿಸುತ್ತದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪಾಕ್ನ ಹೆಸರು ತೆಗೆದುಕೊಳ್ಳದೆಯೇ ಆ ದೇಶಕ್ಕೆ ಎಚ್ಚರಿಕೆ ರವಾನಿಸಿದ್ದಾರೆ. ಭಾರತದ ಅವಿಭಾಜ್ಯ ಅಂಗಗಳಾಗಿರುವ ಪ್ರದೇಶಗಳ ಬಗ್ಗೆ ನಿರ್ಣಯ ಕೈಗೊಳ್ಳಲು ಪಾಕಿಸ್ತಾನಕ್ಕೆ ಯಾವ ಅಧಿಕಾರವಿದೆ? ಭಾರತದಂಥ ಶಕ್ತಿಶಾಲಿ ರಾಷ್ಟ್ರದೊಡನೆ ಅದು ಯಾವ ಕ್ಷೇತ್ರದಲ್ಲೂ ಸ್ಪರ್ಧಿಸಲಾಗದು. ಅದಕ್ಕೆ ಬೆಂಬಲವಾಗಿ ನಿಂತಿದ್ದ ಚೀನಾ ಕೂಡ ಈಗ ಕರೊನಾ ವಿಷಯದಲ್ಲಿ ಖಳನಾಯಕನ ಸ್ಥಾನದಲ್ಲಿ ನಿಂತಿದೆ. ಆದ್ದರಿಂದ, ಪಾಕಿಸ್ತಾನ ವಾಸ್ತವಗಳನ್ನು ಅರ್ಥಮಾಡಿಕೊಂಡು, ತನ್ನ ಹಳೆಯ ಚಾಳಿಯನ್ನು ಬಿಡಬೇಕು. ಇಲ್ಲದಿದ್ದಲ್ಲಿ ರಾಜತಾಂತ್ರಿಕವಾಗಿಯೂ ಹೇಗೆ ಮಣಿಸಬೇಕು ಎಂಬುದು ಭಾರತಕ್ಕೆ ಗೊತ್ತಿದೆ ಎಂಬುದನ್ನು ಮರೆಯದಿರಲಿ.