ನ್ಯೂಸ್

ಡ್ರ್ಯಾಗನ್​ ಮೇಲೆ ಶ್ರೀರಾಮಚಂದ್ರ ದಾಳಿ ನಡೆಸಿದ ಚಿತ್ರ ಹಾಂಕಾಂಗ್​​ನಲ್ಲಿ ವೈರಲ್​, ತೈವಾನ್​ ನ್ಯೂಸ್​ ಪೋರ್ಟಲ್​ನಲ್ಲಿ ಫೋಟೋ ಆಫ್​ ದ ಡೇ!

ತೈಪೇಯಿ: ಚೀನಾ- ಭಾರತ ಗಡಿ ಸಂಘರ್ಷ ಜಾಗತಿಕವಾಗಿ ಗಮನಸೆಳೆದಿದ್ದು, ಚೀನಾ ಅಧೀನದ ಹಾಂಕಾಂಗ್​ನ ಜನ ಈ ಸಂಘರ್ಷದ ಫಲಿತಾಂಶವನ್ನು ಎದುರುನೋಡುತ್ತಿದ್ದಾರೆ. ಈ ನಡುವೆ, ಹಾಂಕಾಂಗ್​ನ ಸಾಮಾಜಿಕ ತಾಣದಲ್ಲಿ ಡ್ರ್ಯಾಗನ್ ಮೇಲೆ ಶ್ರೀರಾಮಚಂದ್ರ ದಾಳಿ ನಡೆಸುತ್ತಿರುವ ಕ್ಯಾರಿಕೇಚರ್ ಒಂದು ವೈರಲ್ ಆದರೆ, ತೈವಾನ್ ನ್ಯೂಸ್ ಪೋರ್ಟಲ್ ಅದನ್ನು ಫೋಟೋ ಆಫ್ ದ ಡೇ ಎಂದು ಪ್ರಕಟಿಸಿ ಗಮನಸೆಳೆಯಿತು.

ಲಡಾಕ್​ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತದ ಯೋಧರು ಚೀನಾ ಯೋಧರನ್ನು ಎದುರಿಸಿ ಹಿಮ್ಮೆಟ್ಟಿಸಿದ ಕ್ರಮದ ಬಗ್ಗೆ ಚೀನಾ ಅಧೀನದ ಹಾಂಕಾಂಗ್​​ನಲ್ಲೇ ಖುಷಿ, ಸಂಭ್ರಮ ವ್ಯಕ್ತವಾಗಿದೆ. ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದರೆ ಚೀನಾದ 43 ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸುದ್ದಿ ಪ್ರಕಟವಾದ ಮಾರನೇ ದಿನ ಹಾಂಕಾಂಗ್​ನ ಸಾಮಾಜಿಕ ಜಾಲತಾಣ LIHKG ನಲ್ಲಿ ವಿ ವಿಲ್ ಕಾಂಕರ್​, ವಿ ಕಿಲ್ ಎಂಬ ಶೀರ್ಷಿಕೆಯ ಇಲ್ಲಸ್ಟ್ರೇಷನ್ ವೈರಲ್ ಆಗಿದೆ. ಇದರಲ್ಲಿ ಭಾರತದ ಭಗವಾನ್ ಶ್ರೀರಾಮಚಂದ್ರ ಚೀನಾದ ಸಂಕೇತವಾಗಿರುವ ಡ್ರ್ಯಾಗನ್​ ಅನ್ನು ಬಾಣ ಹೂಡಿ ಮಣಿಸುವ ದೃಶ್ಯವಿದೆ.

ಹಾಂಕಾಂಗ್​ನ ಟ್ವಿಟರ್ ಬಳಕೆದಾರ ಹೊಸೈಲೀ ಇದನ್ನು ಶೇರ್ ಮಾಡಿಕೊಂಡಿದ್ದು, ಸಿನೋ-ಇಂಡಿಯನ್ ವಾರ್​ ಬಗ್ಗೆ ಭಾರತೀಯ ಗೆಳೆಯನೊಬ್ಬ ಬಿಡಿಸಿರುವ ಪೋಸ್ಟರ್ ಇದಾಗಿದ್ದು ವೈರಲ್ ಆಗಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಭಾರತವನ್ನು ಹಾಂಕಾಂಗ್ ಜನ ಬೆಂಬಲಿಸುತ್ತಾರೆ ಎಂಬುದನ್ನು ಅಲ್ಲಿನ ಸಾಮಾಜಿಕ ತಾಣದಲ್ಲಿ ಭಾರಿ ಪ್ರಮಾಣದಲ್ಲಿ ವ್ಯಕ್ತವಾಗಿದೆ ಎಂದೂ ತೈವಾನ್ ನ್ಯೂಸ್ ವರದಿ ಮಾಡಿದೆ. (ಏಜೆನ್ಸೀಸ್)