ನವದೆಹಲಿ: ಕರೊನಾ ಸಂಕಷ್ಟದಿಂದ ವಿಶ್ವವೇ ತತ್ತರಿಸುತ್ತಿದೆ. ಜಗತ್ತಿನ ದೊಡ್ಡಣ್ಣ ಎನಿಸಿರುವ ಅಮೆರಿಕ ಮಾತ್ರೆಗಳಿಗಾಗಿ ಭಾರತವನ್ನು ಯಾಚಿಸುವಂತಾಯಿತು. ಹೃದಯ ವೈಶಾಲ್ಯತೆ ಮೆರೆದ ಪ್ರಧಾನಿ ಮೋದಿ 'ನಾವೆಲ್ಲ ಒಟ್ಟಾಗಿ ಕರೊನಾ ವಿರುದ್ಧ ಸಮರ ಜಯಿಸೋಣ' ಎಂಬ ಸಂದೇಶದೊಂದಿಗೆ ವೈದ್ಯಕೀಯ ನೆರವು ನೀಡಿದ್ದಾರೆ.
ಭಾರತ ಇಂಥ ನೆರವು ನೀಡುತ್ತಿರುವುದು ಅಮೆರಿಕಕ್ಕೆ ಅಷ್ಟೇ ಅಲ್ಲ. ಬ್ರೆಜಿಲ್ಗೂ ಸಹಾಯದ ಹಸ್ತ ಚಾಚಿದೆ. ಆ ಮೂಲಕ ವೈದ್ಯಕೀಯ ರಾಯಭಾರತ್ವ ನಡೆಸಿದೆ. ಇದಲ್ಲದೇ ಹಲವು ರಾಷ್ಟ್ರಗಳಿಗೆ ಜೀವರಕ್ಷಕ ಔಷಧಗಳನ್ನು ಕಳುಹಿಸಿಕೊಟ್ಟಿದೆ ಎಂದು ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ್, ನೇಪಾಳ, ಮಯನ್ಮಾರ್, ಶಿಶೇಲ್ಸ್, ಮಾರಿಷಸ್ ಹಾಗೂ ಆಫ್ರಿಕಾ ಖಂಡದ ಕೆಲ ರಾಷ್ಟ್ರಗಳಿಗೂ ಭಾರತ ವೈದ್ಯಕಿಯ ನೆರವನ್ನು ಕಳುಹಿಸಿಕೊಡುತ್ತಿದೆ. ಮಂಗಳವಾರ ಏರ್ ಇಂಡಿಯಾ ವಿಮಾನದಲ್ಲಿ 10 ಟನ್ಗಳಷ್ಟು ಔಷಧಗಳನ್ನು ಶ್ರೀಲಂಕಾಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಔಷಧ ರಫ್ತಿಗೆ ಅವಕಾಶ:
ನೆರೆಯ ರಾಷ್ಟ್ರಗಲಳಿಗೆ ನೆರವಿನ ರೂಪದಲ್ಲಿ ಔಷಧಗಳನ್ನು ನೀಡಿದರೂ, ಇನ್ನು ಹಲವು ರಾಷ್ಟ್ರಗಳಿಗೆ ಔಷಧಗಳನ್ನು ರಫ್ತು ಮಾಡಲು ಔಷಧ ಕಂಪನಿಗಳಿಗೆ ಅವಕಾಶ ಮಾಡಿಕೊಟ್ಟಿದೆ. ಇದರಂತೆ, ಅಮೆರಿಕ, ಸ್ಪೇನ್, ಬ್ರೆಜಿಲ್, ಬಹ್ರೇನ್, ಜರ್ಮನಿ ಹಾಗೂ ಬ್ರಿಟನ್ಗೆ ಪ್ಯಾರಾಸಿಟಮಾಲ್ ಮಾಗೂ ಹೈಡ್ರೋಕ್ಸಿಕ್ಲೊರೊಕ್ವಿನ್ ಮಾರಾಟಕ್ಕೆ ಒಪ್ಪಂದ ಮಾಡಿಕೊಳ್ಳಲು ಭಾರತೀಯ ಕಂಪನಿಗಳಿಗೆ ಸರ್ಕಾರ ಅನುಮತಿ ನೀಡಿದೆ.
ಇದಲ್ಲದೇ, ಕೊಲ್ಲಿ ರಾಷ್ಟ್ರಗಳಿಗೆ ಬೇಕಾಗುವ ಔಷಧದ ಪ್ರಮಾಣದ ಬಗ್ಗೆಯೂ ಭಾರತ ನಿಗಾ ವಹಿಸಿದೆ. ಜತೆಗೆ ರಷ್ಯಾಗೂ ಈ ಜೀವರಕ್ಷಕ ವಕ್ಷಧಗಳು ಬೇಕೆ ಎಂಬ ಬಗ್ಗೆಯೂ ಭಾರತ ಮಾತುಕತೆ ನಡೆಸಿದೆ.
ಈ ನಡುವೆ, ಭಾರತ ವೈದ್ಯಕೀಯ ಉಕರಣಗಳನ್ನು ಬೀಜಿಂಗ್ನ ಖಾಸಗಿ ಉತ್ಪಾದಕರಿಂದ ಖರೀದಿಸಲು ಮುಂದಾಗಿದೆ. ಏಕೆಂದರೆ, ಸದ್ಯ ಚೀನಾದಲ್ಲಿ ಮಾತ್ರ ಹೆಚ್ಚುವರಿ ವೈದ್ಯಕೀಯ ಸಲಕರಣೆಗಳ ಸಂಗ್ರಹವಿದೆ. (ಏಜೆನ್ಸೀಸ್)