ಭಾರತೀಯ ಹಾಕಿ ತಂಡದ ಮಾಜಿ ನಾಯಕ ಎಂ.ಎಂ.ಸೋಮಯ್ಯ  
ನ್ಯೂಸ್

ಭಾರತದ ಐತಿಹಾಸಿಕ ಒಲಿಂಪಿಕ್ಸ್ ಚಿನ್ನದ ಪದಕ ಕಳವು! ಬೆಂಗಳೂರಿನಲ್ಲಿ ಮಾಜಿ ಹಾಕಿ ನಾಯಕನ ಮನೆಗೆ ಕನ್ನ | Olympic Gold Medal

1980ರ ಮಾಸ್ಕೋ ಒಲಿಂಪಿಕ್ಸ್‌ನ ಐತಿಹಾಸಿಕ ಚಿನ್ನದ ಪದಕ ಕಳುವು

ಮಾಜಿ ಹಾಕಿ ನಾಯಕ ಎಂ.ಎಂ.ಸೋಮಯ್ಯ ಮನೆಯಲ್ಲಿ ಕಳ್ಳತನ

ಚಿನ್ನ-ಬೆಳ್ಳಿ ಆಭರಣಗಳು ಹಾಗೂ ನಗದು ಸೇರಿ ಒಟ್ಟು 3.53 ಲಕ್ಷ ರೂ. ನಾಪತ್ತೆ

ನೀಲಿ ಮತ್ತು ಕೆಂಪು ಶರ್ಟ್ ಧರಿಸಿದ್ದ ಮನೆಗೆ ನುಗ್ಗಿದ್ದ ಇಬ್ಬರು ಕಳ್ಳರು

MM Somaya: ಭಾರತೀಯ ಹಾಕಿ ತಂಡದ ಮಾಜಿ ನಾಯಕ ಎಂ.ಎಂ.ಸೋಮಯ್ಯ ಅವರ ಬೆಂಗಳೂರಿನ ಮನೆಗೆ ಕಳ್ಳರು ಕನ್ನ ಹಾಕಿದ್ದು, 1980ರ ಒಲಿಂಪಿಕ್ಸ್‌ನಲ್ಲಿ ಭಾರತ ಗೆದ್ದಿದ್ದ ಐತಿಹಾಸಿಕ ಚಿನ್ನದ ಪದಕ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ.

ಹೆಚ್.ಎ.ಎಲ್. 3ನೇ ಹಂತದ ನ್ಯೂ ತಿಪ್ಪಸಂದ್ರದಲ್ಲಿರುವ ಸೋಮಯ್ಯ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಸೋಮಯ್ಯ ಅವರು ಕುಟುಂಬ ಸಮೇತ ಅಕ್ಟೋಬರ್ 25ರಂದು ಕೊಡಗಿನ ಸ್ವಂತ ಊರಿಗೆ ತೆರಳಿದ್ದರು. ಅಕ್ಟೋಬರ್ 28ರಂದು ಮುಂಜಾನೆ 7.15ರ ಸುಮಾರಿಗೆ ಮನೆಯ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿದ ಪಕ್ಕದ ಮನೆಯವರು ಸೋಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ.

ನೀಲಿ-ಕೆಂಪು ಶರ್ಟ್ ಧರಿಸಿದ್ದ ಕಳ್ಳರು

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಅಕ್ಟೋಬರ್ 28ರಂದು ಮುಂಜಾನೆ 2.34ರ ಸುಮಾರಿಗೆ ನೀಲಿ ಮತ್ತು ಕೆಂಪು ಶರ್ಟ್ ಧರಿಸಿದ್ದ ಇಬ್ಬರು ವ್ಯಕ್ತಿಗಳು ಮುಂಭಾಗದ ಬಾಗಿಲು ಮುರಿದು ಒಳಗೆ ನುಗ್ಗಿರುವುದು ಕಂಡುಬಂದಿದೆ.

ಕಳುವಾದ ವಸ್ತುಗಳು

ಕಳ್ಳರು ದೋಚಿದ ವಸ್ತುಗಳಲ್ಲಿ 1980ರ ಮಾಸ್ಕೋ ಒಲಿಂಪಿಕ್ಸ್‌ನ ಚಿನ್ನದ ಪದಕ, 1982ರ ಏಷ್ಯನ್ ಗೇಮ್ಸ್‌ನ ಬೆಳ್ಳಿ ಪದಕ, 1986ರ ಏಷ್ಯನ್ ಗೇಮ್ಸ್‌ನ ಕಂಚಿನ ಪದಕ ಹಾಗೂ 1982ರ ಆಮ್‌ಸ್ಟರ್‌ಡ್ಯಾಮ್ ಚಾಂಪಿಯನ್ಸ್ ಟ್ರೋಫಿಯ ಕಂಚಿನ ಪದಕ ಸೇರಿವೆ. ಇದರ ಜತೆಗೆ 10 ಗ್ರಾಂ ಚಿನ್ನದ ಬಳೆ, 8 ಗ್ರಾಂ ಚಿನ್ನದ ನಾಣ್ಯ, ಬೆಳ್ಳಿಯ ಕಪ್, ಚಮಚ, ಚೊಂಬು ಹಾಗೂ 30,000 ರೂ. ನಗದು ಸೇರಿದಂತೆ ಒಟ್ಟು 3.53 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಲಾಗಿದೆ.

ರಾಷ್ಟ್ರದ ಹೆಮ್ಮೆಯ ಸಂಕೇತ

ಘಟನೆ ಕುರಿತು ಬೇಸರ ವ್ಯಕ್ತಪಡಿಸಿದ 67 ವರ್ಷದ ಸೋಮಯ್ಯ, ‘ಕಳುವಾದ ವಸ್ತುಗಳಲ್ಲಿ ಭಾರತ ಪುರುಷರ ಹಾಕಿಯಲ್ಲಿ ಗೆದ್ದ ಕೊನೆಯ ಒಲಿಂಪಿಕ್ ಚಿನ್ನದ ಪದಕವೂ ಸೇರಿದೆ. ಇದು ನನ್ನ ಹಲವು ವರ್ಷಗಳ ಶ್ರಮ ಹಾಗೂ ಇಡೀ ದೇಶದ ಕ್ರೀಡಾ ಇತಿಹಾಸದ ಹೆಮ್ಮೆಯ ಸಂಕೇತ’ ಎಂದು ಹೇಳಿದ್ದಾರೆ. ಪ್ರಕರಣದ ತನಿಖೆ ಚುರುಕುಗೊಳಿಸಿ ಪದಕವನ್ನು ಶೀಘ್ರ ಪತ್ತೆಹಚ್ಚುವಂತೆ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಬಿಎನ್‌ಎಸ್ ಅಡಿಯಲ್ಲಿ ದೂರು ದಾಖಲು

ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ದೂರು ದಾಖಲಾಗಿದೆ. ಆರೋಪಿಗಳನ್ನು ಬಂಧಿಸಲು ಮತ್ತು ಕಳುವಾದ ವಸ್ತುಗಳನ್ನು ವಶಪಡಿಸಿಕೊಳ್ಳಲು ಇಬ್ಬರು ವಿಶೇಷ ತನಿಖಾ ತಂಡಗಳನ್ನು (Special Teams) ರಚಿಸಲಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ.

ಇದನ್ನೂ ಓದಿ: Chhattisgarh Bear Attack: ಮರಿ ಕಳೆದುಕೊಂಡ ಆಕ್ರೋಶ! ಹೊಲದಲ್ಲಿದ್ದ ಅಣ್ಣ-ತಂಗಿಯನ್ನು ಬಲಿ ಪಡೆದ ತಾಯಿ ಕರಡಿ!

ಸೋಮಯ್ಯ ಅವರು 1980 (ಮಾಸ್ಕೋ), 1984 (ಲಾಸ್ ಏಂಜಲೀಸ್) ಮತ್ತು 1988 (ಸಿಯೋಲ್) ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 1988ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡದ ನಾಯಕರಾಗಿದ್ದ ಇವರಿಗೆ 1985ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.