ಮುಂಬೈ: ಕಳೆದ 26 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದ ಆಸ್ಟ್ರೇಲಿಯಾದ 38 ವರ್ಷದ ಮಹಿಳೆಯೊಬ್ಬರಿಗೆ ಮುಂಬೈನ ಆಸ್ಪತ್ರೆಯಲ್ಲಿ ಮನೋವೈದ್ಯಕೀಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 2017ರಲ್ಲಿ ಹೊಸ ಮನೋರೋಗ ಕಾನೂನು ಅಂಗೀಕಾರವಾದ ನಂತರ ಇದು ಭಾರತದಲ್ಲಿ ನಡೆದ ಪ್ರಪ್ರಥಮ ಸರ್ಜರಿಯಾಗಿದೆ.
ರೋಗಿಯು ಪ್ರಜ್ಞಾಪೂರ್ವಕ ಅನುಮತಿ ನೀಡಿದರೆ ಮಾತ್ರವೇ ಮನೋ ಶಸ್ತ್ರಚಿಕಿತ್ಸೆ ನಡೆಸಲು ಹೊಸ ಕಾನೂನು ಅವಕಾಶ ಕಲ್ಪಿಸುತ್ತದೆ. ಅಲ್ಲದೆ, ವಿಶೇಷವಾಗಿ ಸ್ಥಾಪಿಸಲಾದ ರಾಜ್ಯ ಮಾನಸಿಕ ಆರೋಗ್ಯ ಮಂಡಳಿಯ ಅನುಮೋದನೆಯೂ ಅದಕ್ಕೆ ಅಗತ್ಯ. ಹಿಂದೆ, ಆಸ್ಪತ್ರೆ ಮಂಡಳಿಯೇ ಇಂಥ ಅರ್ಜಿಗಳನ್ನು ಪರಿಗಣಿಸುತ್ತಿತ್ತು.
ಹೆಸರನ್ನು ಬಹಿರಂಗಪಡಿಸದ ಆಸ್ಟ್ರೇಲಿಯಾ ರೋಗಿಯ ವಿಚಾರದಲ್ಲಿ, ನರಶಸ್ತ್ರಚಿಕಿತ್ಸಕ ಪರೇಶ್ ದೋಷಿಯವರೊಂದಿಗೆ ಸಮಾಲೋಚನೆ ಮತ್ತು ರಾಜ್ಯ ಸರ್ಕಾರದ ಅನುಮತಿ ಪಡೆಯುವ ಪ್ರಕ್ರಿಯೆಗೆ 10 ತಿಂಗಳು ಹಿಡಿಯಿತು. ಮೇ 28ರಂದು ಮಹಿಳೆಗೆ ಸರ್ಜರಿ ನಡೆಸಲಾಯಿತು.
ಖಿನ್ನತೆಯು ಅತಿ ವ್ಯಾಪಕ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಜನಸಂಖ್ಯೆಯ ಶೇಕಡ 15 ಮಂದಿಯನ್ನು ಮಾನಸಿಕ ಆರೋಗ್ಯ ಸಮಸ್ಯೆ ಬಾಧಿಸುತ್ತದೆ ಎಂದು ಕೆಲವು ಅಧ್ಯಯನಗಳು ಅಂದಾಜು ಮಾಡಿವೆ. ಆ ಪೈಕಿ ಮೂರನೇ ಒಂದರಷ್ಟು ರೋಗಿಗಳಲ್ಲಿ ಖಿನ್ನತೆಯಿದ್ದು ಮಾತ್ರೆ ಹಾಗೂ ಶಾಕ್ ಥೆರಪಿ ಸಹಿತ ವಿವಿಧ ಚಿಕಿತ್ಸೆಗಳೂ ಅವರ ಮೇಲೆ ಪರಿಣಾಮ ಬೀರುವುದಿಲ್ಲ.
ಮೊದಲ ರಾಜ್ಯ: ಮಾನಸಿಕ ಆರೋಗ್ಯ ಆಯೋಗ ಸ್ಥಾಪಿಸಿದ ಭಾರತದ ಮೊದಲ ರಾಜ್ಯ ಮಹಾರಾಷ್ಟ್ರ. ಅಷ್ಟು ಮಾತ್ರವಲ್ಲದೆ ಸರ್ಜರಿಗೆ ಅನುಮತಿ ನೀಡಿದ ಮೊದಲ ರಾಜ್ಯವೂ ಆಗಿದೆ ಎಂದು ಜಸ್ರಾಕ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ದೋಷಿ ಹೇಳಿದ್ದಾರೆ.
ಸರ್ಜರಿ ಹೇಗೆ?: ಮಾನಸಿಕ ಖಿನ್ನತೆಯ ರೋಗಿಗಳಿಗೆ ಅಂತಿಮ ಪರಿಹಾರವೆಂಬಂತೆ ಡೀಪ್ ಬ್ರೇಯ್್ನ ಸ್ಟಿಮ್ಯುಲೇಶನ್ (ಡಿಬಿಎಸ್) ಸರ್ಜರಿಯನ್ನು ಶಿಫಾರಸು ಮಾಡಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯಲ್ಲಿ, ನರದ ಪಥ ಬದಲಾವಣೆಗೆ ಮಿದುಳಿನಲ್ಲಿ ಎಲೆಕ್ಟ್ರೋಡ್ಗಳನ್ನು ಇರಿಸಲಾಗುತ್ತದೆ. ರ್ಪಾನ್ಸನ್ ವ್ಯಾಧಿಯಿಂದ ಹಿಡಿದು ಒಬ್ಸೆಸಿವ್-ಕಂಪಲ್ಸಿವ್ ಡಿಸಾರ್ಡರ್ ಮತ್ತು ಖಿನ್ನತೆವರೆಗಿನ ಅನೇಕ ನರಸಂಬಂಧಿ ಪರಿಸ್ಥಿತಿಗಳಲ್ಲಿ ಡಿಬಿಎಸ್ ಬಳಸಲಾಗುತ್ತದೆ.