ರಾಜಧಾನಿ ನವದೆಹಲಿಯಲ್ಲಿ ನಡೆದ ಹದಿನೆಂಟನೇ ಬ್ರಿಕ್ಸ್ ಶೃಂಗಸಭೆ ಭಾನುವಾರ ಮುಕ್ತಾಯಗೊಂಡಿದೆ. ಎರಡು ದಿನಗಳು, 12 ದೇಶಗಳ ಅಗ್ರ ನಾಯಕರು, ಸಾವಿರಾರು ಪ್ರತಿನಿಧಿಗಳು, ಡಜನ್ಗಟ್ಟಲೇ ಕಾರ್ಯಕ್ರಮಗಳು ಮತ್ತು ಎಲ್ಲರ ಒಮ್ಮತದೊಂದಿಗೆ ಅಂಗೀಕರಿಸಲ್ಪಟ್ಟ ಒಂದು ಘೋಷಣಾಪತ್ರವು ಈಗ ಜಾಗತಿಕವಾಗಿ ಗಮನ ಸೆಳೆದಿದೆ. ಬ್ರಿಕ್ಸ್ನ ಎಲ್ಲ 11 ಸದಸ್ಯ ರಾಷ್ಟ್ರಗಳು 140 ಪ್ಯಾರಾಗ್ರಾಫ್ಗಳ ಜಂಟಿ ಘೋಷಣಾಪತ್ರವಾದ "ನವದೆಹಲಿ ಡಿಕ್ಲರೇಶನ್'ಗೆ (ಹೊಸ ದೆಹಲಿ ಘೋಷಣೆ) ಸಹಿ ಹಾಕಿರುವುದು, ಭಾರತ ರಾಜತಾಂತ್ರಿಕ ಕ್ಷೇತ್ರದಲ್ಲಿ ಸಾಧಿಸಿರುವ ಸ್ಪಷ್ಟವಾದ ಮೇಲುಗೈ. ಮಾತ್ರವಲ್ಲ, ಇದು ಬ್ರಿಕ್ಸ್ ಒಕ್ಕೂಟದಲ್ಲಿ ಒಗ್ಗಟ್ಟು ಮತ್ತು ಸಹಕಾರದ ಭಾವವನ್ನು ಹೆಚ್ಚಿಸಿರುವುದಕ್ಕೆ ಸಾಕ್ಷಿ.
ವಿಶ್ವದಲ್ಲಿ ಪ್ರಸ್ತುತ ನಾಲ್ಕು ದೊಡ್ಡ ಸಂಘರ್ಷಗಳು ನಡೆಯುತ್ತಿವೆ. ಅಮೆರಿಕ&ಇರಾನ್, ರಷ್ಯಾ&ಯೂಕ್ರೇನ್, ಸೌದಿ ಅರೇಬಿಯಾ&ಹೌತಿ ಮತ್ತು ಇಸ್ರೇಲ್&ಲೆಬನಾನ್. ಪ್ರಪಂಚದಾದ್ಯಂತ ಪ್ರಕ್ಷುಬ್ಧತೆ ಹಾಗೂ ಅನಿಶ್ಚಿತತೆಯ ವಾತಾವರಣವಿದೆ. ಬ್ರಿಕ್ಸ್ನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ , "ಅಮೆರಿಕ ವಿರೋಧಿ' ಎಂದು ಜರಿಯುತ್ತಾರೆ. "ಬ್ರಿಕ್ಸ್ನ ಅಮೆರಿಕ ವಿರೋಧಿ ನೀತಿಗಳನ್ನು ಬೆಂಬಲಿಸುವ ಯಾವುದೇ ದೇಶದ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು' ಎಂದು ಟ್ರಂಪ್ ಎಚ್ಚರಿಕೆ ಸಹ ನೀಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬ್ರಿಕ್ಸ್ ಶೃಂಗಸಭೆಯಂತಹ ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವುದು ಸುಲಭವಾಗಿರಲಿಲ್ಲ. ಪರಸ್ಪರ ಸಂಘರ್ಷದಲ್ಲಿ ತೊಡಗಿರುವ ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳನ್ನೂ ಭಾರತ ಒಪ್ಪಿಸುವಲ್ಲಿ ಯಶಸ್ವಿಯಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳಲ್ಲಿ 15ಕ್ಕೂ ಹೆಚ್ಚು ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು ಮತ್ತು ಕೆಲವು ಪರಸ್ಪರ ವಿರೋಧಿ ದೇಶಗಳನ್ನೂ ಒಂದೆಡೆ ಕೂರಿಸಿದರು. ಪುತಿನ್ ಭೇಟಿಯ ವೇಳೆ ವ್ಯಾಪಾರ, ರಕ್ಷಣೆ ಮತ್ತು ಇಂಧನ ವಿಷಯಗಳ ಕುರಿತು ಚರ್ಚೆ ನಡೆಯಿತು. ಯೂಕ್ರೇನ್ ಯುದ್ಧದ ಶಾಂತಿಯುತ ಪರಿಹಾರಕ್ಕಾಗಿ ಭಾರತ ಮತ್ತು ಪ್ರಧಾನಿ ಮೋದಿಯವರ ರಾಜತಾಂತ್ರಿಕ ಪ್ರಯತ್ನಗಳನ್ನು ಪುತಿನ್ ಶ್ಲಾಘಿಸಿದರು ಹಾಗೂ ಕೃತಜ್ಞತೆ ಸಲ್ಲಿಸಿದರು. ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಅವರೊಂದಿಗಿನ ಮಾತುಕತೆಯಲ್ಲಿ ಪ್ರಧಾನಿ ಮೋದಿ, ನೌಕಾಯಾನ ಮತ್ತು ವ್ಯಾಪಾರದ ಮುಕ್ತತೆಗೆ ಒತ್ತು ನೀಡಿದರು. ಕಳೆದ 8 ವರ್ಷಗಳಲ್ಲಿ ಇರಾನ್ ಅಧ್ಯಕ್ಷರೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿತ್ತು.
ಇದೇ ವೇಳೆ "ದೆಹಲಿ ಘೋಷಣಾಪತ್ರ'ದಲ್ಲಿ ಪಹಲ್ಗಾಮ್ ದಾಳಿಯನ್ನು ಖಂಡಿಸಲಾಗಿದ್ದು, "ನಾವು 2025ರ ಏಪ್ರಿಲ್ 22ರಂದು ಜಮ್ಮು&ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಕಟುಶಬ್ದಗಳಲ್ಲಿ ಖಂಡಿಸುತ್ತೇವೆ ಮತ್ತು ಗಡಿಯಾಚೆಗಿನ ಉಗ್ರರ ನುಸುಳುವಿಕೆ ಸೇರಿದಂತೆ ಭಯೋತ್ಪಾದನೆಯ ಎಲ್ಲ ರೂಪಗಳ ವಿರುದ್ಧ ಹೋರಾಡಲು ಬದ್ಧರಾಗಿದ್ದೇವೆ' ಎಂದು ಹೇಳುವ ಮೂಲಕ ಭಯೋತ್ಪಾದನೆ ವಿರುದ್ಧದ ಸಮರಕ್ಕೆ ಬಲ ಸಿಕ್ಕಂತಾಗಿದೆ. ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಏಳು ವರ್ಷಗಳ ಬಳಿಕ ಭಾರತಕ್ಕೆ ಭೇಟಿ ನೀಡಿದ್ದಲ್ಲದೆ, ಗಡಿ ವಿವಾದಕ್ಕೆ ನಿಷ್ಪಕ್ಷಪಾತ, ನ್ಯಾಯಯುತ ಮತ್ತು ಪರಸ್ಪರ ಸ್ವೀಕಾರಾರ್ಹ ಪರಿಹಾರವನ್ನು ಕಂಡುಕೊಳ್ಳುವ ಮಾತನ್ನು ಪುನರುಚ್ಚರಿಸಿದ್ದಾರೆ. ಟ್ರಂಪ್ ಹೇರುತ್ತಿರುವ ವಿವೇಚನಾರಹಿತ ಸುಂಕ ನೀತಿಗೂ ಬ್ರಿಕ್ಸ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ, ಅಮೆರಿಕದ ಡಾಲರ್ ಪ್ರಾಬಲ್ಯ ಕುಗ್ಗಿಸಲು ಸ್ಥಳೀಯ ಕರೆನ್ಸಿಗಳಲ್ಲಿ ವ್ಯಾಪಾರಕ್ಕೆ ಉತ್ತೇಜನ ನೀಡುವ ಬಗ್ಗೆ ಒಮ್ಮತದ ಅಭಿಪ್ರಾಯ ಏರ್ಪಟ್ಟಿದೆ. ಜಾಗತಿಕವಾಗಿ ರಾಜಕೀಯ ಬಿಕ್ಕಟ್ಟಿನ ಸ್ಥಿತಿ ಇರುವಾಗ ಭಾರತ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯ ಮೂಲಕ, ಮತ್ತೊಮ್ಮೆ ತನ್ನ ಪ್ರಭಾವ ಹಾಗೂ ಶಕ್ತಿಯನ್ನು ಜಗತ್ತಿನೆದುರಿಗೆ ಪರಿಚಯಿಸಿದೆ.