ಶಿವಮೊಗ್ಗ: ಮುಂದಿನ 25 ವರ್ಷದಲ್ಲಿ ಭಾರತ ಪರಿಪೂರ್ಣ ವಿಕಾಸ ಆಗಬೇಕು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯಾಗಿದ್ದು ಅದನ್ನು ಸಾಕಾರಗೊಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ತುಂಗಾನಗರ ಮತ್ತು ದ್ರೌಪದಮ್ಮ ವೃತ್ತದಲ್ಲಿ ಭಾನುವಾರ ಕೇಂದ್ರ ಸರ್ಕಾರದ ವಿಕಸಿತ ಭಾರತ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದ ಅವರು, ಪ್ರಧಾನಿ ಮೋದಿ ಅವರು ಇದುವರೆಗೆ ಯಾವುದೇ ಒಂದು ಸಮಾಜ ಅಥವಾ ಪಕ್ಷಕ್ಕಾಗಿ ಯೋಜನೆಗಳನ್ನು ಕೊಟ್ಟಿಲ್ಲ. ಈ ನಾಡಿನ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧರಾಗಿ ದುಡಿಯುತ್ತಿದ್ದಾರೆ. 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪೈಕಿ ಮೇಲ್ಪಂಕ್ತಿಯಲ್ಲಿ ಕೂರುವಂತೆ ಮಾಡುವ ಕನಸು ಹೊತ್ತಿದ್ದಾರೆ ಎಂದರು.
ಸ್ವಾತಂತ್ರೃ ಬಂದು 70 ವರ್ಷ ಕಳೆದರೂ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ವೇಗ ಸಿಕ್ಕಿರಲಿಲ್ಲ. ಬೇರೆ ದೇಶಗಳಲ್ಲೂ ಪ್ರತಿದಿನ 28ರಿಂದ 20 ಕಿ.ಮೀ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಆಗುತ್ತಿದೆ. ಆದರೆ ಭಾರತದಲ್ಲಿ ಇದೀಗ ಪ್ರತಿದಿನ 38ರಿಂದ 40 ಕಿ.ಮೀ.ವರೆಗೆ ಹೆದ್ದಾರಿ ನಿರ್ಮಾಣ ಆಗುತ್ತಿದೆ. 28 ಸಾವಿರ ಕೋಟಿ ರೂ. ರಕ್ಷಣಾ ಇಲಾಖೆಗೆ ಮೀಸಲಿಡಲಾಗಿದೆ ಎಂದು ಹೇಳಿದರು.
ಶಾಸಕ ಎಸ್.ಎಸ್.ಚನ್ನಬಸಪ್ಪ, ಕೆನರಾ ಬ್ಯಾಂಕ್‌ನ ಪ್ರತಿನಿಧಿ ಬಿ.ಆರ್.ಶಂಕರಪ್ಪ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಪಾಲಿಕೆ ಮಾಜಿ ಸದಸ್ಯರಾದ ಲಕ್ಷ್ಮೀ ಶಂಕರನಾಯ್ಕ, ರಾಹುಲ್ ಬಿದರೆ, ಬಿಜೆಪಿ ಮುಖಂಡ ವಿನ್ಸಂಟ್, ಅಂಚೆ, ಬ್ಯಾಂಕ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.