ನವದೆಹಲಿ: ಭಾರತದಲ್ಲಿ ಕರೊನಾ ಸೋಂಕಿತರ ಚೇತರಿಕೆ ಪ್ರಮಾಣ ಶೇ. 92ಕ್ಕೆ ಏರಿಕೆಯಾಗಿದೆ. ಮಂಗಳವಾರ 46 ಸಾವಿರ ಪ್ರಕರಣಗಳು ಪತ್ತೆಯಾಗಿದ್ದರೆ, 53 ಸಾವಿರಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಸೋಂಕಿತರ ಸಂಖ್ಯೆ 83 ಲಕ್ಷ ದಾಟಿದೆ. ಅದರಲ್ಲಿ 76.56 ಲಕ್ಷಕ್ಕೂ ಅಧಿಕ ಮಂದಿ ಚೇತರಿಸಿಕೊಂಡಿದ್ದು, 5.33 ಲಕ್ಷ ಸಕ್ರಿಯ ಪ್ರಕರಣ ಬಾಕಿಯುಳಿದಿದೆ. ಮೃತರ ಸಂಖ್ಯೆ 1,23,600ಕ್ಕೆ ಏರಿಕೆಯಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಏಕದಿನ ಪ್ರಕರಣಗಳ ಸಂಖ್ಯೆ ಶೇ. 20 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೆಹಲಿಯಲ್ಲಿ 6,725 ಹೊಸ ಪ್ರಕರಣಗಳು ದೃಢವಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 4 ಲಕ್ಷಕ್ಕೂ ಅಧಿಕವಾಗಿದೆ. ದೇಶದಲ್ಲಿ ಕರೊನಾ ಮರಣ ಪ್ರಮಾಣ ಶೇ. 1.49ರಷ್ಟಿದ್ದರೆ ದೆಹಲಿಯಲ್ಲಿ ಶೇ. 1.65ರಷ್ಟು ವರದಿಯಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ. 8.36ರಷ್ಟಿದೆ. ರಾಜ್ಯದಲ್ಲಿ ಸೋಂಕಿನ ಮೂರನೇ ಅಲೆ ಆರಂಭವಾಗಿರುವುದು ಖಚಿತ. ಜನರು ಭಯ ಪಡುವುದು ಬೇಡ, ಪರಿಸ್ಥಿತಿಯನ್ನು ನಿಯಂತ್ರಸಿಲು ನಾವು ಸಿದ್ಧರಿದ್ದೇವೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ. ಕೇರಳದಲ್ಲಿಯೂ 6,800ಕ್ಕೂ ಹೆಚ್ಚು ಹೊಸ ಪ್ರಕರಣ ವರದಿಯಾಗಿದೆ.
ವಿಶ್ವಾದ್ಯಂತ ಮಂಗಳವಾರ 4.85 ಲಕ್ಷ ಪ್ರಕರಣಗಳು ದೃಢವಾಗಿವೆ. ಅದರಲ್ಲಿ 2.39 ಲಕ್ಷ ಪ್ರಕರಣಗಳು ಯುರೋಪಿಯನ್ ರಾಷ್ಟ್ರಗಳದ್ದು. ಅಮೆರಿಕದಲ್ಲಿ 94,500 ಪ್ರಕರಣ ಕಾಣಿಸಿಕೊಂಡಿದೆ.
ಒಡಿಶಾದಲ್ಲಿ ಪಟಾಕಿಗೆ ನಿರ್ಬಂಧ: ದೀಪಾವಳಿ ಸಮಯದಲ್ಲಿ ಪಟಾಕಿಯನ್ನು ನಿಷೇಧಿಸಿ ಒಡಿಶಾ ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 10ರಿಂದ 30ರವರಗೆ ಪಟಾಕಿಗೆ ನಿಷೇಧವಿರಲಿದೆ. ಪಟಾಕಿಯಿಂದ ಉಂಟಾಗುವ ಮಾಲಿನ್ಯದಿಂದ ಕರೊನಾ ಸೋಂಕಿತರ ಆರೋಗ್ಯ ಹದಗೆಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಇಟಲಿಯಲ್ಲಿ ರಾತ್ರಿ ಕರ್ಫ್ಯೂ: ಕರೊನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಟಲಿಯಲ್ಲಿ ರಾತ್ರಿ ಕರ್ಫ್ಯೂ ಘೋಷಣೆ ಮಾಡಲಾಗಿದೆ. ಗುರುವಾರದಿಂದ ಕಠಿಣ ನಿರ್ಬಂಧಗಳು ಜಾರಿಗೆ ಬರಲಿವೆ. ಪ್ರಾಂತ್ಯಗಳ ನಡುವೆ ಸಂಚಾರ ಎರಡು ವಾರಗಳ ಮಟ್ಟಿಗೆ ಸ್ಥಗಿತವಾಗಲಿದೆ. ಹೆಚ್ಚು ಪ್ರಕರಣಗಳಿರುವ ಪ್ರಾಂತ್ಯಗಳಲ್ಲಿ ಆವಶ್ಯಕ ಸಾಮಗ್ರಿಗಳ ಅಂಗಡಿಗಳನ್ನು ಮಾತ್ರ ತೆರೆಯಲು ಆದೇಶಿಸಲಾಗಿದೆ. ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್, ಜರ್ಮನಿ, ಫ್ರಾನ್ಸ್ ಮತ್ತು ಬೆಲ್ಜಿಯಂನಲ್ಲಿ ಲಾಕ್ಡೌನ್ ಹೇರಲಾಗಿದೆ.
ಐದು ದಿನಗಳವರೆಗೆ ರ್ಯಾಪಿಡ್ ಪರೀಕ್ಷೆ ಸೂಕ್ತ: ಜನರು ಸೋಂಕಿಗೆ ತುತ್ತಾದ ಐದು ದಿನಗಳವರೆಗೆ ರ್ಯಾಪಿಡ್ ಆಂಟಿಜೆನ್ ಪರೀಕ್ಷೆ ಹೆಚ್ಚು ನಿಖರ ವರದಿ ನೀಡುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಐಸಿಎಂಆರ್ನ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ರ್ಯಾಪಿಡ್ ಪರೀಕ್ಷೆಯ ನಂತರ ಆರ್ಟಿಪಿಸಿಆರ್ ಪರೀಕ್ಷೆ ಅವಶ್ಯಕ ಎನ್ನಲಾಗಿದೆ. ಅಧ್ಯಯನಕ್ಕೆ ಒಳಗಾದವರಲ್ಲಿ ಶೇ. 31 ಮಂದಿಗೆ ಜ್ವರ, ಕೆಮ್ಮು (ಶೇ. 25.4), ಆಯಾಸ (ಶೇ. 11.8), ತಲೆನೋವು (ಶೇ. 3.3) ಕಾಣಿಸಿಕೊಂಡಿದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ಚಿತ್ರಮಂದಿರ ಪುನರಾರಂಭ: ಮಹಾರಾಷ್ಟ್ರದಲ್ಲಿ ಗುರುವಾರದಿಂದ ಚಿತ್ರಮಂದಿರಗಳನ್ನು ತೆರೆಯಲಾಗುತ್ತಿದೆ. ಶೇ. 50 ವೀಕ್ಷಕರೊಂದಿಗೆ ಚಿತ್ರ ಪ್ರದರ್ಶನ ನಡೆಸಲು ಅನುಮತಿ ನೀಡಲಾಗಿದೆ. ಅದರ ಜತೆಯಲ್ಲಿ ಒಳಾಂಗಣ ಕ್ರೀಡಾಂಗಣಗಳು, ಈಜುಕೊಳಗಳು ಹಾಗೂ ಯೋಗ ಕೇಂದ್ರ ತೆರೆಯಲು ಅನುಮತಿ ನೀಡಲಾಗಿದೆ. ಕಂಟೇನ್ಮೆಂಟ್ ವಲಯದಲ್ಲಿನ ನಿರ್ಬಂಧ ಮುಂದುವರಿಯಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ವರ್ಷಾಂತ್ಯಕ್ಕೆ ಆಕ್ಸ್ಫರ್ಡ್ ಲಸಿಕೆ ವರದಿ
ಕರೊನಾ ಸೋಂಕಿಗೆ ಅಸ್ತ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯಗಳು ಜಂಟಿಯಾಗಿ ತಯಾರಿಸಿರುವ ಔಷಧದ ಅಂತಿಮ ಹಂತದ ಕ್ಲಿನಿಕಲ್ ಟ್ರಯಲ್ನ ವರದಿಯನ್ನು ಈ ವರ್ಷದ ಅಂತ್ಯದೊಳಗೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ಲಸಿಕೆ ಪ್ರಯೋಗದ ಮುಖ್ಯ ತನಿಖಾಧಿಕಾರಿ ಆಂಡ್ರ್ಯೂ ಪೊಲಾರ್ಡ್ ತಿಳಿಸಿದ್ದಾರೆ. ಔಷಧದ ವರದಿ ಪ್ರಕಟವಾದ ನಂತರ ಅದನ್ನು ಅಧ್ಯಯನ ನಡೆಸಬೇಕು. ಔಷಧ ಶೇ. 50ಕ್ಕಿಂತ ಹೆಚ್ಚು ಪರಿಣಾಮಕಾರಿಯಾಗಿದ್ದರೆ ಅನುಮತಿ ಪಡೆಯಬೇಕು. ಅದಾದ ನಂತರ ಮಾರುಕಟ್ಟೆಗೆ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಕ್ಲಿನಿಕಲ್ ಪ್ರಯೋಗದಲ್ಲಿ ಮುಂಚೂಣಿ ಯಲ್ಲಿರುವ ಔಷಧಗಳಲ್ಲಿ ಈ ಔಷಧವೂ ಒಂದಾಗಿದೆ.