ನ್ಯೂಸ್

ಬಡತನದ ಅಗ್ನಿಕುಂಡಕ್ಕೆ ಭಾರತದ 40 ಕೋಟಿ ಕಾರ್ವಿುಕರು! :2ನೇ ವಿಶ್ವ ಯುದ್ಧದ ನಂತರದ ಕೆಟ್ಟ ಜಾಗತಿಕ ಬಿಕ್ಕಟ್ಟು

ವಿಶ್ವಸಂಸ್ಥೆ: ಕರೊನಾ ಮಹಾಮಾರಿ ಸೃಷ್ಟಿಸಿರುವ ಬಿಕ್ಕಟ್ಟಿನಿಂದಾಗಿ ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಭಾರತದ ಸುಮಾರು 40 ಕೋಟಿ ಕಾರ್ವಿುಕರು ಬಡತನದ ಇನ್ನಷ್ಟು ಆಳವಾದ ಪ್ರಪಾತಕ್ಕೆ ಬೀಳುವ ಅಪಾಯವಿದೆ! ವಿಶ್ವ ಸಂಸ್ಥೆಯ ಕಾರ್ವಿುಕ ವಿಭಾಗವಾದ ಅಂತಾರಾಷ್ಟ್ರೀಯ ಕಾರ್ವಿುಕ ಸಂಸ್ಥೆ (ಐಎಲ್​ಒ) ಇಂಥದ್ದೊಂದು ಗಂಭೀರ ಎಚ್ಚರಿಕೆ ನೀಡಿದೆ. ಈ ವರ್ಷದ ದ್ವಿತೀಯಾರ್ಧದಲ್ಲಿ ಜಗತ್ತಿನಾದ್ಯಂತ 19.5 ಕೋಟಿ ಪೂರ್ಣ ಪ್ರಮಾಣದ ಉದ್ಯೋಗ ಅಥವಾ ಕೆಲಸದ ಗಂಟೆಗಳ ಶೇ.6.7 ಉದ್ಯೋಗ ನಷ್ಟವಾಗುವ ನಿರೀಕ್ಷೆಯಿದೆ ಎಂಬುದು ಐಎಲ್​ಒ ಲೆಕ್ಕಾಚಾರ.

ಕರೊನಾ ಮಹಾಮಾರಿ ‘ಎರಡನೇ ವಿಶ್ವ ಯುದ್ಧದ ನಂತರದ ಅತ್ಯಂತ ಕೆಟ್ಟ ಜಾಗತಿಕ ಬಿಕ್ಕಟ್ಟು’ ಎಂದು ಐಎಲ್​ಒ ವರ್ಣಿಸಿದೆ. ‘ಅಭಿವೃದ್ಧಿಶೀಲ ಹಾಗೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳೆರಡರಲ್ಲೂ ಕಾರ್ವಿುಕರು ಮತ್ತು ವ್ಯಾಪಾರ-ವ್ಯವಹಾರಗಳು ಮಹಾ ದುರಂತ ಎದುರಿಸುತ್ತಿವೆ. ನಾವು ತುಂಬಾ ವೇಗವಾಗಿ, ನಿರ್ಣಾಯಕವಾಗಿ ಹಾಗೂ ಒಟ್ಟಿಗೆ ಸಾಗಬೇಕಿದೆ. ಸರಿಯಾದ, ತುರ್ತು ಕ್ರಮಗಳು ಅಳಿವು-ಉಳಿವಿನ ನಡುವೆ ವ್ಯತ್ಯಾಸ ಉಂಟು ಮಾಡಬಹುದು’ ಎಂದು ಐಎಲ್​ಒ ಮಹಾನಿರ್ದೇಶಕ ಗಯ್ ರೈಡರ್ ಮಂಗಳವಾರ ಹೇಳಿದ್ದಾರೆ.

ದೊಡ್ಡ ಪರೀಕ್ಷೆ

ಕರೊನಾ ತಂದಿರುವ ಸಂಕಷ್ಟ ಕಳೆದ 75 ವರ್ಷಗಳಲ್ಲೇ ಅಂತಾರಾಷ್ಟ್ರೀಯ ಸಹಕಾರಕ್ಕೆ ಒದಗಿರುವ ಅತಿ ದೊಡ್ಡ ಪರೀಕ್ಷೆ. ಒಂದು ದೇಶ ವಿಫಲವಾದರೆ ನಾವೂ ವಿಫಲರಾಗುತ್ತೇವೆ. ಜಾಗತಿಕ ಸಮಾಜದ ಎಲ್ಲರೂ ಪರಸ್ಪರ ಸಹಕಾರಕ್ಕೆ ಮುಂದಾಗಬೇಕೆಂದು ಐಎಲ್​ಒ ಅಭಿಪ್ರಾಯ ಪಟ್ಟಿದೆ.

200 ಕೋಟಿ ಜನರಿಗೆ ಸಂಕಷ್ಟ

ಜಗತ್ತಿನಾದ್ಯಂತ, ಬಹುತೇಕವಾಗಿ ಜಗತ್ತಿನ ಅಭಿವೃದ್ಧಿಶೀಲ ದೇಶಗಳ ಅಸಂಘಟಿತ ವಲಯದಲ್ಲಿ 200 ಕೋಟಿ ಜನರು ಕೆಲಸ ಮಾಡುತ್ತಿದ್ದು ಅವರು ಅಪಾಯಕ್ಕೆ ಸಿಲುಕುವ ಸಂಭವವಿದೆ. ಕೋಟ್ಯಂತರ ಕಾರ್ವಿುಕರು ಈಗಾಗಲೇ ಕೊವಿಡ್-19 ಮಾರಿಯಿಂದ ತೊಂದರೆಗೊಳಗಾಗಿದ್ದಾರೆ.

ಹಳ್ಳಿಯತ್ತ ಕಾರ್ವಿುಕರು

ಭಾರತದಲ್ಲಿ ದುಡಿಯುವವರಲ್ಲಿ ಶೇ.90 ಮಂದಿ ಅಸಂಘಟಿತ ಆರ್ಥಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಾಗಿದ್ದಾರೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಕೊವಿಡ್-19 ಸರ್ಕಾರಿ ಪ್ರತಿಕ್ರಿಯೆ ಕಟ್ಟುನಿಟ್ಟಿನ ಸೂಚ್ಯಂಕದ ಪ್ರಕಾರ ಭಾರತದಲ್ಲಿ ಜಾರಿಯಲ್ಲಿರುವ ಲಾಕ್​ಡೌನ್ ಕ್ರಮಗಳಿಂದ ಕಾರ್ವಿುಕರು ಗಣನೀಯ ಪ್ರಮಾಣದಲ್ಲಿ ತೊಂದರೆಗೆ ಒಳಗಾಗಿದ್ದು ಅವರ ಪೈಕಿ ಬಹಳಷ್ಟು ಮಂದಿ ಗ್ರಾಮೀಣ ಪ್ರದೇಶಗಳಿಗೆ ಮರಳುವಂತೆ ಒತ್ತಡ ಹೇರಿದೆ. ‘ಭಾರತ, ನೈಜೀರಿಯಾ ಮತ್ತು ಬ್ರೆಜಿಲ್​ನಲ್ಲಿ ಲಾಕ್​ಡೌನ್ ಮತ್ತು ಇತರ ಕ್ರಮಗಳಿಂದಾಗಿ ಸಮಸ್ಯೆಗೊಳಗಾದ ಕಾರ್ವಿುಕರ ಸಂಖ್ಯೆ ಗಣನೀಯವಾಗಿದೆ’ ಎಂದು ವರದಿ ಹೇಳಿದೆ.

ಉದ್ಯೋಗ ನಷ್ಟ ಸಾಧ್ಯತೆ

ಅರಬ್ ದೇಶಗಳು: 8.1%. ಅಂದರೆ 50 ಲಕ್ಷ ಪೂರ್ಣ ಪ್ರಮಾಣದ ಉದ್ಯೋಗ

ಯುರೋಪ್: 7.8% ಅಂದರೆ 1.2 ಕೋಟಿ ಪೂರ್ಣ ಪ್ರಮಾಣದ ಉದ್ಯೋಗ

ಏಷ್ಯಾ ಮತ್ತು ಪೆಸಿಫಿಕ್: 7.2%. ಅಂದರೆ 12.5 ಕೋಟಿ ಪೂರ್ಣ ಪ್ರಮಾಣದ ಉದ್ಯೋಗ

ಜಗತ್ತಿನ ಕೆಲಸಗಾರರ ಪೈಕಿ ಐವರಲ್ಲಿ ನಾಲ್ವರು (ಅಂದರೆ 81%) ಕೆಲಸದ ಸ್ಥಳಗಳ ಭಾಗಶಃ ಅಥವಾ ಪೂರ್ಣ ಪ್ರಮಾಣದ ಮುಚ್ಚುವಿಕೆಯಿಂದ ಸಮಸ್ಯೆಗೆ ಒಳಗಾಗಿದ್ದಾರೆ.

ಪರಿಹಾರವೇನು?

ಉದ್ಯಮಗಳನ್ನು ಬೆಂಬಲಿಸುವ ಜತೆಗೆ ಆದಾಯ ಹೆಚ್ಚಳ ಮಾಡಿ ಕೆಲಸದ ಸ್ಥಳಗಳಲ್ಲಿ ಕಾರ್ವಿುಕರನ್ನು ರಕ್ಷಿಸಬೇಕಿದೆ. ಇದಕ್ಕಾಗಿ ಸರ್ಕಾರಗಳು ಸಮಗ್ರ ನೀತಿ ರೂಪಿಸಬೇಕೆಂದು ಸಂಸ್ಥೆ ಸಲಹೆ ಮಾಡಿದೆ.