ನ್ಯೂಸ್

ಭಾರತೀಯರು ಜೆಮ್ಸ್ ಥರ ಡೋಲೋ-650 ನುಂಗ್ತಾರೆ!ಅಮೆರಿಕದ ವೈದ್ಯರು..Dolo 650

Dolo 650: ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಕಂಡುಬರುವ ಜ್ವರ ಮಾತ್ರೆ ಪ್ಯಾರಸಿಟಮಾಲ್, ಎಲ್ಲಾ ರೀತಿಯ ಜ್ವರದಿಂದ ಹಿಡಿದು ಮೈಕೈ ನೋವು, ತಲೆನೋವು, ಶೀತ ಹೀಗೆ ಯಾವುದೇ ರೀತಿಯ ನೋವಿನವರೆಗೆ ಎಲ್ಲದಕ್ಕೂ ನಮ್ಮ ಪ್ರಮುಖ ಪರಿಹಾರವಾಗಿದೆ. ಆದರೆ ಪದೆ ಪದೇ ಅದನ್ನು ಸೇವಿಸಿದರೆ ಅದು ಸುರಕ್ಷಿತವಲ್ಲ.

ಯಾರಾದರೂ ತಲೆ ನೋವು, ಜ್ವರ ಎನ್ನುತ್ತಿದ್ದಂತೆ 'ವಿಶ್ರಾಂತಿ ತೆಗೆದುಕೊಳ್ಳಿ' ಅನ್ನುವ ಮೊದಲು, 'ಡೋಲೋ ತಗೋ' ಎನ್ನುವುದನ್ನು ಎಲ್ಲರೂ ಕೇಳಿರಬಹುದು.

ಕೊರೋನಾ ಕಾಲದಲ್ಲಂತೂ 'ಡೋಲೋ-650'ಗೆ ಸರ್ವರೋಗ ನಿವಾರಕ ಎಂಬ ಪಟ್ಟ ಅಘೋಷಿತವಾಗಿ ಸಿಕ್ಕಿತ್ತು. ಈ ದುರಂತವನ್ನು ವಿಭಿನ್ನವಾಗಿ ವರ್ಣಿಸಿರುವ ಡಾ. ಪಾಲ್ ಎಂದೇ ಜನಪ್ರಿಯರಾಗಿರುವ ಅಮೆರಿಕ ಮೂಲದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ಪಳನಿಯಪ್ಪನ್ ಮಾಣಿಕ್ಕಂ ಅವರು , 'ಭಾರತೀಯರು ಕ್ಯಾಡ್​ಬರಿ ಜೆಮ್ಸ್ ತಿನ್ನುವಂತೆ ಡೋಲೋ ನುಂಗ್ತಾರೆ' ಎಂದು ಪೋಸ್ಟ್ ಮಾಡಿದ್ದಾರೆ. 'ಯಾವುದೇ ಮಾತ್ರೆಯನ್ನು ವೈದ್ಯರ ಸಲಹೆಗಿಂತ ಹೆಚ್ಚು ನುಂಗುವುದು ಅಪಾಯಕಾರಿ' ಎಂಬ ಸಂದೇಶ ರವಾನಿಸಿದಾರೆ.

ಡೋಲೋ 650 ದೇಶದಲ್ಲೇ ಅತಿಹೆಚ್ಚು ಮಾರಾಟವಾಗುವ ಔಷಧಿ ಎನಿಸಿಕೊಂಡಿದೆ. ಡೊಲೊ 650‌ ಒಂದರಿಂದಲೇ ಕಂಪನಿ 5.7 ಶತಕೋಟಿ ರೂ.ಗಳ ಆದಾಯ ಗಳಿಸಿದೆ ಎಂದು ವರದಿಯಾಗಿದೆ. ಡೋಲೋ 650 ಮಾತ್ರೆ ಹೆಚ್ಚಾಗಿ ಸೇವಿಸುವ ಮುನ್ನ ಪ್ರತಿಯೊಬ್ಬರೂ ಎಚ್ಚರವಹಿಸಬೇಕು.

ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಡೋಲೋ 650 ಮಾತ್ರೆ ಸೇವನೆ ಮಾಡುವುದು ಆರೋಗ್ಯಕ್ಕೆ ಬಹಳ ಅಪಾಯಕಾರಿ. ಕೊರೊನಾ ರೋಗ ಕಾಣಿಸಿಕೊಂಡವರಿಗೂ ವೈದ್ಯರು ಸಹ ಪ್ಯಾರಾಸಿಟಮಾಲ್ ಔಷಧಿಯಾದ ಡೋಲೋ 650 ಮಾತ್ರೆ ಸೇವಿಸಲು ಸೂಚಿಸಿದ್ದರು. ಹೀಗಾಗಿಯೇ ಜನರು ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಎನ್ನುವಂತೆ ಡೋಲೋ 650 ಮಾತ್ರೆಯನ್ನು ತಂದು ಇಟ್ಟುಕೊಂಡಿದ್ದರು.

ತಜ್ಞರ ಪ್ರಕಾರ, ಔಷಧಿಗಳ ಮಿತಿಮೀರಿದ ಬಳಕೆಯು ನಿರ್ದಿಷ್ಟ ಅಂಗಗಳ ಮೇಲೆ ಮತ್ತು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಅದೇ ರೀತಿ ಡೋಲೋ 650 ಮಾತ್ರೆ ಸೇವನೆಯಿಂದ ನೀವು ಗಂಭೀರ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.  ಡೋಲೋ 650 ಮಾತ್ರೆಗಳ ಅತಿಯಾದ ಸೇವನೆಯಿಂದ ವಾಕರಿಕೆ, ವಾಂತಿ, ಮಲಬದ್ಧತೆ, ತಲೆತಿರುಗುವಿಕೆ ಅಥವಾ ಅರೆನಿದ್ರಾವಸ್ಥೆ ಸಂಭವಿಸಬಹುದು. ದೀರ್ಘಕಾಲದವರೆಗೆ ಇವುಗಳನ್ನು ಸೇವಿಸಿದರೆ ದಣಿವು, ಉಸಿರಾಟದ ತೊಂದರೆ, ರಕ್ತಹೀನತೆ ಮತ್ತು ಮೂತ್ರಪಿಂಡಳಿಗೆ ಸಮಸ್ಯೆ ಉಂಟಾಗಬಹುದು. ಅಧಿಕ ರಕ್ತದೊತ್ತಡ ಹೊಂದಿದವರಾಗಿದ್ದರೆ ಹೃದ್ರೋಗ ಮತ್ತು ಪಾರ್ಶ್ವವಾಯುವಿಗೂ ಕಾರಣವಾಗುತ್ತದೆ ಎನ್ನಲಾಗಿದೆ. ಹೀಗಾಗಿ ವೈದ್ಯರ ಸಲಹೆ ಮೇರೆಗೆ ಈ ಮಾತ್ರೆಯನ್ನು ಬಳಸುವುದು ಸೂಕ್ತ..