ನ್ಯೂಸ್

ನಮ್ಮ ಉತ್ಪನ್ನಗಳು ಇಲ್ಲದೆ ಭಾರತೀಯರ ಜೀವನ ದುಸ್ಸಾಧ್ಯ ಎಂದ ಚೀನಾ

ನವದೆಹಲಿ: ದೇಶಾದ್ಯಂತ ಸದ್ಯ ಚೀನಾ ವಿರೋಧ ಮನೋಭಾವ ದಟ್ಟವಾಗಿದೆ. ಅದರಲ್ಲೂ ವಿಶೇಷವಾಗಿ ಜಗತ್ತನ್ನೇ ಬಾಧಿಸುತ್ತಿರುವ ಕರೊನಾ ವೈರಾಣುವಿನ ಉಗಮ ಸ್ಥಾನ ಚೀನಾ ಎಂಬುದರಿಂದ ಹಿಡಿದು ಲಡಾಖ್​ ಪ್ರದೇಶದಲ್ಲಿ ತಲೆದೋರಿರುವ ಬಿಕ್ಕಟ್ಟಿನವರೆಗೆ ಇದಕ್ಕೆ ಕಾರಣವಾಗಿದೆ. ಆದರೆ, ಸುಲಭ ದರದಲ್ಲಿ ಸಿಗುವ ತನ್ನ ಉತ್ಪನ್ನಗಳು ಹಾಗೂ ಆ್ಯಪ್​ಗಳನ್ನು ಬಿಟ್ಟು ಬದಕಲು ಭಾರತೀಯರಿಗೆ ಸಾಧ್ಯವೇ ಇಲ್ಲ ಎಂದು ಚೀನಾ ಹೇಳಿಕೊಂಡಿದೆ.

ಚೀನಾದ ಮುಖವಾಣಿ ಗ್ಲೋಬಲ್​ ಟೈಮ್ಸ್​ನಲ್ಲಿ ಈ ಬಗ್ಗೆ ವರದಿಯಾಗಿದ್ದು, ಚೀನಾ ನಿರ್ಮಿತ ಸ್ಮಾರ್ಟ್​ಫೋನ್​ಗಳು ಮತ್ತು ಮೊಬೈಲ್​ ಆ್ಯಪ್​ಗಳನ್ನು ಬಹಿಷ್ಕರಿಸುವ ಹಿಂದೆ ಭಾರತೀಯ ರಾಷ್ಟ್ರೀಯವಾದಿಗಳ ಕೈವಾಡವಿದೆ. ಚೀನಾದ ಹೆಸರಿಗೆ ಮಸಿ ಬಳಿಯುವ ಜತೆಗೆ ಕಳಂಕ ತರುವ ಹುನ್ನಾರ ಅವರದ್ದಾಗಿದೆ ಎಂದು ಆರೋಪಿಸಲಾಗಿದೆ.

ಭಾರತದಲ್ಲಿ ಸದ್ಯ ಚಾಲ್ತಿಯಲ್ಲಿರುವ ಬೈಕಾಟ್​ ಚೀನಾ (ಚೀನಾವನ್ನು ಬಹಿಷ್ಕರಿಸಿ) ಅಭಿಯಾನ ಖಂಡಿವಾಗಿಯೂ ವಿಫಲವಾಗುತ್ತದೆ. ಚೀನಾ ಉತ್ಪನ್ನಗಳ ಬಗೆಗಿನ ಭಾರತೀಯ ಆಕರ್ಷಣೆ ಮತ್ತು ಪ್ರೀತಿ, ಸೆಳತವನ್ನು ಕಡಿಮೆ ಮಾಡುವುದು ಅಸಾಧ್ಯದ ಮಾತು ಎಂದು ತಿಳಿಸಲಾಗಿದೆ.