ನವದೆಹಲಿ: ನಾಳೆಯಿಂದ ದೇಶಾದ್ಯಂತ ದೇಶೀಯ ಕರೊನಾ ಲಸಿಕೆಯ ಕ್ಲಿನಿಕಲ್ ಟ್ರಯಲ್ (ಮಾನವರ ಮೇಲೆ ಪ್ರಯೋಗ) ನಡೆಯಲಿದೆ.
ದೇಶಾದ್ಯಂತ 12 ವೈದ್ಯಕೀಯ ಸಂಸ್ಥೆಗಳನ್ನು ಇದಕ್ಕೆ ಗುರುತಿಸಲಾಗಿದ್ದು, ಆರಂಭದಲ್ಲಿ 375 ಜನರ ಮೇಲೆ ಪ್ರಯೋಗ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಒಂದರ್ಥದಲ್ಲಿ ಲಸಿಕೆ ಅಭಿವೃದ್ಧಿಯಲ್ಲಿ ಇವರ ಪಾತ್ರ ಬಹುಮುಖ್ಯ.
ಅಂತೆಯೇ, ಆಕ್ಸ್ಫರ್ಡ್ ವಿವಿ ತಜ್ಞರು ಲಸಿಕೆ ಅಭಿವೃದ್ಧಿ ಪಡಿಸುವಲ್ಲಿ ಜೀವವನ್ನೇ ಪಣಕ್ಕಿಟ್ಟಿದ್ದಾರೆ ಭಾರತೀಯ ಮೂಲದ 42 ವರ್ಷದ ದೀಪಕ್ ಪಲಿವಾಲ್. ರಾಜಸ್ಥಾನದ ಜೈಪುರ್ನವರಾದ ಇವರು ಪತ್ನಿಯೊಂದಿಗೆ ಲಂಡನ್ನಲ್ಲಿ ನೆಲೆಸಿದ್ದಾರೆ.
ಆಕ್ಸ್ಫರ್ಡ್ ವಿವಿ ತಯಾರಿಸುತ್ತಿರುವ ಲಸಿಕೆಗೆ ಇವರು ಪ್ರಯೋಗಾರ್ಥಿಯಾಗಿದ್ದರು. ಕ್ಲಿನಿಕಲ್ ಟ್ರಯಲ್ಗೆ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ ಎಂಬುದು ಗೊತ್ತಾದಾಗ ಸ್ವಯಂಪ್ರೇರಿತವಾಗಿ ನೋಂದಾಯಿಸಿಕೊಂಡು ಏಪ್ರಿಲ್ 26 ರಂದು ಪರೀಕ್ಷೆಗೆ ಹಾಜರಾಗಿದ್ದರು.
ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ವಿರುದ್ಧ ಹೋರಾಟಕ್ಕೆ ಕೊಡುಗೆ ನೀಡಬೇಕೆಮದು ಬಯಸಿದ್ದೆ. ನನ್ನ ಮಿದುಳಂತೂ ಈ ಕಾರ್ಯದಲ್ಲಿ ಪ್ರಯೋಜನಕ್ಕೆ ಬಾರದಿದ್ದರೂ ದೇಹವನ್ನು ಬಳಸಬಹುದು ಎಂಬ ಯೋಚನೆ ಬಂತು. ಕೂಡಲೇ ಕ್ಲಿನಿಕಲ್ ಟ್ರಯಲ್ಗೆ ಒಪ್ಪಿಕೊಂಡೆ. ಆದರೆ, ಪತ್ನಿ ಹಾಗೂ ಮನೆಯವರು ಇದಕ್ಕೆ ಒಪ್ಪಿರಲಿಲ್ಲ ಎಂದು ದೀಪಕ್ ಹೇಳಿದ್ದಾರೆ.
ಲಸಿಕೆ ಅಡ್ಡ ಪರಿಣಾಮ ಬೀರಿದ್ದೇ ಆದಲ್ಲಿ ಅಂಗಾಂಗಗಳು ನಿಷ್ಕ್ರಿಯವಾಗಬಹುದು. ಕೆಲವೊಮ್ಮೆ ಮರಣವೂ ಸಂಭವಿಸಬಹುದು ಎಂದು ಓದಿದ್ದೆ. ಆದರೆ, ಇದ್ಯಾವುದು ನನ್ನ ನಿರ್ಧಾರವನ್ನು ಬದಲಿಸಲಿಲ್ಲ ಎಂದು ದೀಪಕ್ ಹೇಳುತ್ತಾರೆ.
ಆದರೆ, ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ಇವರ ಧೈರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಮುಖ್ಯ ವಿಷಯವೆಂದರೆ, ಆಕ್ಸ್ಫರ್ಡ್ ವಿವಿ ತಯಾರಿಸುತ್ತಿರುವ ಲಸಿಕೆ ಯಶಸ್ವಿಯಾದಲ್ಲಿ ಭಾರತಕ್ಕೂ ಇದು ಲಭಿಸಲಿದೆ. ಕಾರಣ ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದೊಂದಿಗೆ ಆಕ್ಸ್ಫರ್ಡ್ ವಿವಿಯ ಸಹಭಾಗಿ ಕಂಪನಿ ಆಸ್ಟ್ರಾಜೆನೆಕಾ ಒಪ್ಪಂದ ಮಾಡಿಕೊಂಡಿದೆ. ಮೊದಲ 60 ಡೋಸ್ಗಳಲ್ಲಿ 20 ಲಕ್ಷ ಡೋಸ್ ಭಾರತದ ಬಳಕೆಗೆ ಸಿಗಲಿದೆ.