ನವದೆಹಲಿ: ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡುತ್ತಿದೆ ಕರೊನಾ. ಕೋವಿಡ್-19 ಕಾಣಿಸಿಕೊಂಡಿರುವ 200ಕ್ಕೂ ಅಧಿಕ ದೇಶಗಳ ಪೈಕಿ ಬಹುತೇಕ ಎಲ್ಲೆಡೆ ಲಾಕ್ಡೌನ್ ಘೋಷಿಸಲಾಗಿದೆ.
ದೇಶದೊಳಗೆ ಸಾರ್ವಜನಿಕ ಸಾರಿಗೆ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೆ, ವಿಮಾನ ಯಾನವೂ ಸ್ಥಗಿತಗೊಂಡು ವಿದೇಶಗಳಲ್ಲಿರುವ ಭಾರತೀಯರು ಅಲ್ಲಿಯೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲ ದೇಶಗಳು ವಿದೇಶದಲ್ಲಿರುವ ತಮ್ಮ ಪ್ರಜೆಗಳನ್ನು ಕರೆಯಿಸಿಕೊಳ್ಳಲು ವಿಮಾನಗಳ ಸಂಚಾರಕ್ಕೆ ಅನುಮತಿ ನೀಡುತ್ತಿವೆಯಾದರೂ ಸೋಂಕಿನ ಭೀತಿಯಲ್ಲಿ ಕೆಲ ದೇಶಗಳು ಇದಕ್ಕೂ ಅನುಮತಿ ನೀಡುತ್ತಿಲ್ಲ.
ಪ್ರವಾಸಿ ವೀಸಾಗಳ ಮೇಲೆ ವಿದೇಶಗಳಿಗೆ ತೆರಳಿದ್ದವರಲ್ಲಿ ಬಹುತೇಕರು ಭಾರತಕ್ಕೆ ವಾಪಸಾಗಿದ್ದಾರೆ. ಆದರೆ, ವ್ಯಾಸಂಗಕ್ಕಾಗಿ ತೆರಳಿದ್ದವರು ಅಲ್ಲಿಯೇ ಉಳಿಯುವುದು ಅನಿವಾರ್ಯವಾಗಿದೆ. ಭಾರತೀಯರಿಗೆ ಆಸ್ಟ್ರೇಲಿಯಾ ವಿದೇಶ ವ್ಯಾಸಂಗಕ್ಕೆ ನೆಚ್ಚಿನ ತಾಣ ಎನಿಸಿದೆ. ಅಂದಾಜಿನ ಪ್ರಕಾರ ಆಸ್ಟ್ರೇಲಿಯಾದಲ್ಲಿ 2019ರಲ್ಲಿ 1.40 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾದಲ್ಲೂ ಲಾಕ್ಡೌನ್ ಘೋಷಿಸಿದ ಕಾರಣ ಈ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಆಸ್ಟ್ರೇಲಿಯಾ ಸರ್ಕಾರ ಭಾರತೀಯ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದೆ. ಈಗಾಗಲೇ ಆಸ್ಟ್ರೇಲಿಯಾದಲ್ಲಿ ಒಂದು ವರ್ಷ ಕಳೆದಿರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯನಿಧಿ ಖಾತೆಯಲ್ಲಿರುವ ಹಣ ಪಡೆಯಬಹುದು. ಇದು ಆಸ್ಟ್ರೇಲಿಯಾದಲ್ಲಿರುವ ಎಲ್ಲ ವಿದೇಶಿ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ ಎಂದು ಹೇಳಿದೆ.
ಇದಲ್ಲದೇ, ಶಿಕ್ಷಣ ಸಂಸ್ಥೆಗಳು ವಿದೇಶಿ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯ್ತಿ ನೀಡಲು ಮುಂದಾಗಿವ ಎಂದು ವಲಸೆ ಸಚಿವ ಆಲನ್ ಟ್ರಜ್ ತಿಳಿಸಿದ್ದಾರೆ.
ಇವರಿಗ್ಯಾವ ಭವಿಷ್ಯ ನಿಧಿ ಎನ್ನುತ್ತೀರಾ?: ವ್ಯಾಸಂಗದ ಉದ್ದೇಶಗಳಿಗಾಗಿ ಆಗಮಿಸುವ ವಿದ್ಯಾರ್ಥಿಗಳಿಗೆ ಹಲವು ದೇಶಗಳು ತಮ್ಮಲ್ಲಿ ಉದ್ಯೋಗ ಮಾಡುವ ಅವಕಾಶವನ್ನು ಕಲ್ಪಿಸಿವೆ. ವಿದೇಶ ವ್ಯಾಸಂಗದ ಪ್ರಮುಖ ಆಕರ್ಷಣೆ ಕೂಡ ಇದಾಗಿದೆ. ವ್ಯಾಸಂಗದೊಂದಿಗೆ ಉದ್ಯೋಗಕ್ಕೂ ಅವಕಾಶವಿರುವುದರಿಂದ ಹಲವರು ವ್ಯಾಸಂಗಕ್ಕಾಗಿ ವ್ಯಯಿಸಬೇಕಾದ ಮೊತ್ತವನ್ನು ಅಲ್ಲಿ ಅರೆಕಾಲಿಕ ಉದ್ಯೋಗ ಮಾಡುವುದರೊಂದಿಗೆ ಸಂಪಾದಿಸುತ್ತಾರೆ. ಅಂತೆಯೇ ಆಸ್ಟ್ರೇಲಿಯಾದ ಸೂಪರ್ ಮಾರ್ಕೆಟ್, ಹಿರಿಯರ ಆರೈಕೆ ಕೇಂದ್ರಗಳು ಹಾಗೂ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದೆ. ಈ ಅವಧಿಯಲ್ಲಿ ಭವಿಷ್ಯ ನಿಧಿ ಯೋಜನೆಯನ್ನು ಹೊಂದುವುದು ಕಡ್ಡಾಯ. ಪ್ರಸ್ತುತ ಒಂದು ವರ್ಷದಿಂದ ಆಸ್ಟ್ರೇಲಿಯಾದಲ್ಲಿದ್ದು, ಭವಿಷ್ಯ ನಿಧಿ ಮೊತ್ತ ಪಾವತಿಸುತ್ತಿದ್ದವರು ಕರೊನಾ ಸಂಕಷ್ಟದ ಸಮಯದಲ್ಲಿ ಅದನ್ನು ಬಳಸಿಕೊಳ್ಳಲು ಅವಕಾಶ ನೀಡಿದೆ ಆಸ್ಟ್ರೇಲಿಯಾ ಸರ್ಕಾರ. ಇದಲ್ಲದೇ, ವಿದೇಶಿ ವಿದ್ಯಾರ್ಥಿಗಳ ಕೆಲಸದ ಅವಧಿಯನ್ನು 15 ದಿನಕ್ಕೆ 40 ತಾಸು ಎಂದು ನಿಗದಿಪಡಿಸಲಾಗಿದೆ. ಅಂದರೆ ದಿನಕ್ಕೆ ಮೂರು ತಾಸಿಗಿಂತಲೂ ಕಡಿಮೆ ಕೆಲಸ ಮಾಡಿದರೆ ಸಾಕು.
ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಬಯಸುವ ವಿದ್ಯಾರ್ಥಿಗಳು ಮೊದಲ ವರ್ಷದಲ್ಲಿ ಸರ್ಕಾರದಿಂದ ಯಾವುದೇ ನೆರವನ್ನು ಬಯಸುವಂತಿಲ್ಲ ಎಂದು ವೀಸಾ ನಿಯಮ ರೂಪಿಸಲಾಗಿದೆ. ಹೀಗಾಗಿ ಇವರಿಗೆ ಸರ್ಕಾರದಿಂದ ನೇರವಾಗಿ ಸಹಾಯ ಮಾಡುವುದು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅಸಹಾಯಕತೆ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್)