ನವದೆಹಲಿ: ದೆಹಲಿ ಐಐಟಿಯ ಸಂಶೋಧಕರ ತಂಡ ವೆಬ್ ಆಧಾರಿತ ಡ್ಯಾಶ್ ಬೋರ್ಡ್ "ಪ್ರಕೃತಿ'(PRACRITI - Prediction and Assessment of Corona Infections and Transmission in India) ಯನ್ನು ಅಭಿವೃದ್ಧಿಪಡಿಸಿದೆ.
ಇದು ಭಾರತದ ಪ್ರತಿಯೊಂದು ರಾಜ್ಯಗಳು ಹಾಗೂ ಜಿಲ್ಲೆಗಳಲ್ಲಿ ಕೋವಿಡ್-19 ಪ್ರಸರಣ ದರವನ್ನು ತಿಳಿಸುತ್ತದೆ ಮತ್ತು ಭಾರತದಲ್ಲಿ ಕರೊನಾ ವೈರಸ್ ಪ್ರಸರಣವನ್ನು ಹೇಗೆ ನಿಯಂತ್ರಿಸಬೇಕು ಮತ್ತು ತಗ್ಗಿಸಬೇಕು ಎಂಬುದರ ಕುರಿತು ಅಧಿಕಾರಿಗಳು ಮತ್ತು ಸಾರ್ವಜನಿಕರು ತಿಳಿದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
ಪ್ರೊ.ಅನೂಪ್ ಕೃಷ್ಣನ್ ಹಾಗೂ ಸಂಶೋಧಕರ ತಂಡ ಇದನ್ನು ಅಭಿವೃದ್ಧಿಪಡಿಸಿದ್ದು, ದೇಶದ ಪ್ರತಿ ಜಿಲ್ಲೆಯ ಕೋವಿಡ್-19 ಹರಡುವಿಕೆಯ ಕುರಿತು ಮೂರು ವಾರ ಮುನ್ಸೂಚನೆ ನೀಡುತ್ತದೆ.
ಸರ್ಕಾರದ ನೀತಿಗಳು ಹಾಗೂ ಹವಾಮಾನ ಸ್ಥಿತಿಗತಿ ಸೇರಿದಂತೆ ಭಾರತದಲ್ಲಿ ಯಾವುದೇ ಬದಲಾವಣೆಗಳಿಗೆ ಅನುಗುಣವಾಗಿ ವಾರಕ್ಕೊಮ್ಮೆ ಈ ಮುನ್ನೋಟವನ್ನು ನವೀಕರಿಸಲಾಗುತ್ತದೆ ಎಂದು ಕೃಷ್ಣನ್ ತಿಳಿಸಿದ್ದಾರೆ.
"ಪ್ರಕೃತಿ'ಯನ್ನು ಅಭಿವೃದ್ಧಿಪಡಿಸುವ ಹಿಂದಿನ ಪ್ರೇರಣೆಯ ಕುರಿತು ವಿದ್ಯಾರ್ಥಿ ಹರ್ಗುಣ್ ಸಿಂಗ್ ಗ್ರೋವರ್ ಮಾತನಾಡಿ, ಕೋವಿಡ್- 19 ನಿಯಂತ್ರಣ ಹಾಗೂ ತಡೆಗಟ್ಟುವ ತಂತ್ರಗಳನ್ನು ಅಭಿವೃದ್ಧಿಪಡಿಸಲು ಪ್ರತಿ ರಾಜ್ಯದಲ್ಲಿ ನಿಖರವಾದ ಸ್ಥಿತಿಗತಿ ಏನಿದೆ ಎಂಬುದನ್ನು ಹಾಗೂ ಲಾಕ್ಡೌನ್ ಷರತ್ತುಗಳು ಬದಲಾದಂತೆ ಸನ್ನಿವೇಶ ಹೇಗೆ ಬದಲಾಗಬಹುದು ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯ ಎಂದರು.
ಭಾರತದಲ್ಲಿ ಕೋವಿಡ್-19 ನಿಯಂತ್ರಿಸುವಲ್ಲಿ ಮತ್ತು ತಡೆಗಟ್ಟುವಲ್ಲಿ ಅಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಇದು ಸಹಾಯವಾಗಲಿದೆ ಎಂದು ಪ್ರೊ. ಕೃಷ್ಣನ್ ತಿಳಿಸಿದ್ದಾರೆ.(ಏಜೆನ್ಸೀಸ್)