ನವದೆಹಲಿ: ಸುಳ್ಳು ಹೇಳುವ ಮೂಲಕ ತಪ್ಪು ಸಂದೇಶ ರವಾನಿಸಲು ಯತ್ನಿಸಿದ ಪಾಕಿಸ್ತಾನದ ಅಧಿಕಾರಿ ವಿರುದ್ಧ ಕಿಡಿಕಾರಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ, ಪಾಕ್ ನಡೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ನ್ಯಾಷನಲ್ ಸೆಕ್ಯುರಿಟಿ ಆ್ಯಂಡ್ ಸ್ಟ್ರಾಟೆಜಿಕ್ ಪಾಲಿಸಿ ಪ್ಲ್ಯಾನಿಂಗ್ನ ವಿಶೇಷ ಸಹಾಯಕ ಮೊಯಿದ್ ಯೂಸುಫ್ ಭಾರತದ ಪತ್ರಕರ್ತರಿಗೆ ನೀಡಿದ್ದ ಹೇಳಿಕೆಯೇ ಇಷ್ಟಕ್ಕೆಲ್ಲ ಕಾರಣ. ಪಾಕಿಸ್ತಾನದ ಜತೆ ಮಾತನಾಡಲು ಇಚ್ಛಿಸಿ ಭಾರತ ಸಂದೇಶ ಕಳಿಸಿದ್ದಾಗಿ ಯೂಸುಫ್ ಹೇಳಿಕೆ ನೀಡಿದ್ದರು.
ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಅವರು ಇದನ್ನು ಅಲ್ಲಗಳೆದಿದ್ದು, ಕಪೋಲಕಲ್ಪಿತ ಹೇಳಿಕೆಗಳನ್ನು ನೀಡುವುದನ್ನು ಪಾಕಿಸ್ತಾನ ಬಿಡಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಭಾರತ ಯಾವ ಸಂದೇಶವನ್ನೂ ರವಾನಿಸಿಲ್ಲ. ಯೂಸುಫ್ ಭಾರತದ ಆಂತರಿಕ ವಿಷಯದ ಬಗ್ಗೆ ಮಾತನಾಡಿರುವುದು ಸರಿಯಲ್ಲ. ಪಾಕಿಸ್ತಾನದ ಸರ್ಕಾರ ಅಲ್ಲಿನ ತನ್ನ ಆಡಳಿತ ವೈಫಲ್ಯ ಮರೆಮಾಚುವ ಸಲುವಾಗಿ ಭಾರತದ ಬಗ್ಗೆ ಹೇಳಿಕೆ ನೀಡಿ ದೊಡ್ಡ ಸುದ್ದಿ ಆಗುವ ಹಾಗೆ ಮಾಡುತ್ತಿದೆ ಎಂದಿರುವ ಅನುರಾಗ್, ಭಾರತದ ಆಂತರಿಕ ವಿಚಾರದಲ್ಲಿ ತಲೆಹಾಕದಂತೆ ಪಾಕಿಸ್ತಾನದ ಅಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)