ನವದೆಹಲಿ: ಶ್ರೀಲಂಕಾದ ನೌಕಾಪಡೆಯ ಹಡಗು ಮತ್ತು ಭಾರತೀಯ ಮೀನುಗಾರಿಕಾ ದೋಣಿಯೊಂದು ಡಿಕ್ಕಿ ಹೊಡೆದು, ಭಾರತದ ಓರ್ವ ಮೀನುಗಾರ ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆ ಕಚ್ಚದ್ವೀಪದ ಐದು ನಾಟಿಕಲ್ ಮೈಲಿ ದೂರದಲ್ಲಿ ಗುರುವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
"ಒಬ್ಬ ಮೀನುಗಾರ ನಾಪತ್ತೆಯಾಗಿದ್ದು, ಆತನ ಪತ್ತೆಗೆ ನೌಕಾಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ರಕ್ಷಿಸಲ್ಪಟ್ಟ ಮೀನುಗಾರರಲ್ಲಿ ಒಬ್ಬನನ್ನು ಪುಂಕುಡುತೀವು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಅವರು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಮೀನುಗಾರರ ಸ್ಥಿತಿ ಸ್ಥಿರವಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಅವರು ಹೇಳಿದರು.
ಭಾರತ ಮತ್ತು ಶ್ರೀಲಂಕಾ ನಡುವಿನ ಬಾಂಧವ್ಯದಲ್ಲಿ ಮೀನುಗಾರರ ಸಮಸ್ಯೆ ವಿವಾದಾಸ್ಪದವಾಗಿದೆ, ಲಂಕಾ ನೌಕಾಪಡೆಯ ಸಿಬ್ಬಂದಿ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಿಸಿದ್ದಾರೆ ಮತ್ತು ಶ್ರೀಲಂಕಾದ ಪ್ರಾದೇಶಿಕ ಜಲವನ್ನು ಅಕ್ರಮವಾಗಿ ಪ್ರವೇಶಿಸಿದ ಹಲವಾರು ಘಟನೆಗಳಲ್ಲಿ ಅವರ ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
ಭಾರತದಲ್ಲಿರುವ ಶ್ರೀಲಂಕಾದ ಹಂಗಾಮಿ ರಾಯಭಾರಿಯನ್ನು ಕರೆಸಿಕೊಂಡು ಘಟನೆಯ ಬಗ್ಗೆ ತೀವ್ರ ಪ್ರತಿಭಟನೆ ದಾಖಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಘಟನೆಯಲ್ಲಿ ಉಂಟಾದ ಜೀವ ಹಾನಿಗೆ ನಾವು ಅಘಾತ ಹಾಗೂ ಕಳವಳ ವ್ಯಕ್ತಪಡಿಸಿದ್ದೇವೆ. ಕೊಲಂಬೊದಲ್ಲಿರುವ ನಮ್ಮ ರಾಯಭಾರಿ ಕೂಡ ಶ್ರೀಲಂಕಾ ಸರ್ಕಾರದೊಂದಿಗೆ ಇದನ್ನು ಚರ್ಚಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.