ಬಾಳೆಹೊನ್ನೂರು: ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳಲ್ಲೂ ಸಹ ವೈಜ್ಞಾನಿಕ ತಳಹದಿ ಇದೆ ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ರಾಘವೇಂದ್ರ ಹೇಳಿದರು.
ಗಡಿಗೇಶ್ವರದ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ 84 ಲಕ್ಷ ಜೀವಿಗಳಿಗೆ ಕೂಡ ಗೌರವ ಕೊಟ್ಟಿದ್ದೇವೆ. ಪ್ರತಿಯೊಂದನ್ನೂ ಸೂರ್ಯ ಮತ್ತು ಚಂದ್ರರ ಗತಿ ಬದಲಾವಣೆಯಲ್ಲಿ 60 ಸಂವತ್ಸರವಿದೆ. ಅದರ ಆಧಾರವಾಗಿ ಹಬ್ಬ ಹರಿದಿನಗಳು, ಉತ್ಸವಗಳು ನಡೆಯುತ್ತವೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಮಹತ್ವವಿದೆ ಎಂದರು.
ಪ್ರಕೃತಿ ಸಹಜವಾದ ಬದಲಾವಣೆಗಳ ಜತೆ ಹಬ್ಬಗಳು ಹೊಂದಿಕೆಯಾಗಲಿದೆ. ಇದು ಭಾರತದ ವಿಶೇಷ. ಯುಗಾದಿಯಿಂದ ಆರಂಭವಾಗುವ ಹಬ್ಬಗಳು ವರ್ಷ ಪೂರ್ಣ ನಡೆಯುತ್ತವೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ಕನ್ನಡ ಭಾಷೆ ಜತೆಗೆ ಸಂಸ್ಕೃತಿಯನ್ನು ಉಳಿಸುವ ಮಹತ್ತರ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ಕಸಾಪ ಭಾರತದ ಸಂಸ್ಕೃತಿ ಪರಿಚಯ ಮಾಡುವ ನಿಟ್ಟಿನಲ್ಲಿ ಶ್ರಾವಣ ಮಾಸದಲ್ಲಿ ಶ್ರಾವಣ ಸಂಜೆ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ ಭಾರತದ ಹಬ್ಬಗಳ ಪರಿಚಯ ಮಾಡಿ ಕೊಡುತ್ತಿದೆ ಎಂದರು.
ತಾಲೂಕು ಕಸಾಪ ಪೂರ್ವಾಧ್ಯಕ್ಷ ಕೆ.ಟಿ.ವೆಂಕಟೇಶ್ ಮಾತನಾಡಿ, ಸಾಹಿತ್ಯ ಮತ್ತು ಸಂಸ್ಕೃತಿ ಭಾರತೀಯರ ಜೀವಾಳವಾಗಿದೆ. ಕನ್ನಡ ಕೇವಲ ಭಾಷೆಯಲ್ಲ. ಅದು ಕನ್ನಡಿಗರ ಅಸ್ಮಿತೆ. ಕನ್ನಡವನ್ನು ಬೆಳೆಸಬೇಕಿಲ್ಲ, ಉಳಿಸಬೇಕಿಲ್ಲ ಅದನ್ನು ಬಳಸಬೇಕು ಆಗ ಕನ್ನಡ ಸಮೃದ್ಧವಾಗಿ ಬೆಳೆಯುತ್ತದೆ ಎಂದರು.
ಶಾಲಾ ಮಕ್ಕಳಿಗೆ ಏರ್ಪಡಿಸಿ ಮಾತೃಭಾಷೆ ಮಹತ್ವ ಕುರಿತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಸಾಪ ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ್ ಅರಳೀಕೊಪ್ಪ, ಸಹ ಕಾರ್ಯದರ್ಶಿ ಸುಧೀರ್, ಹೋಬಳಿ ಕಸಾಪ ಅಧ್ಯಕ್ಷ ರತ್ನಾಕರ್ ಗಡಿಗೇಶ್ವರ, ಪ್ರಧಾನ ಕಾರ್ಯದರ್ಶಿ ಚೇತನಾ, ಎಸ್‌ಡಿಎಂಸಿ ಅಧ್ಯಕ್ಷ ಶಿವೇಂದ್ರ, ಹಾಸ್ಯ ಕಲಾವಿದ ಶ್ರೀಕೃಷ್ಣಭಟ್ ಮತ್ತಿತರರು ಉಪಸ್ಥಿತರಿದ್ದರು.