ರಿಯಾಧ್: ಸೌದಿ ಅರೇಬಿಯಾದಿಂದ ಕುವೈತ್‌ಗೆ ಬರುತ್ತಿದ್ದಾಗ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದ ಆಂಧ್ರ ಪ್ರದೇಶ ಮೂಲದ ಕುಟುಂಬಕ್ಕೆ ಶುಕ್ರವಾರ ರಿಯಾಧ್ನಲ್ಲಿ ಅಂತಿಮ ಸಂಸ್ಕಾರ ನಡೆಸಲಾಗಿದೆ.
ಅಪಘಾತದಿಂದ ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದರಿಂದ ಮೃತದೇಹಗಳನ್ನು ಶವಾಗಾರದಲ್ಲಿ ಇರಿಸಲಾಗಿತ್ತು. ಮೃತರ ಗುರುತನ್ನು ಡಿಎನ್ಎ ಪರೀಕ್ಷೆ ಮೂಲಕ ದೃಢಪಡಿಸಿಕೊಂಡ ಬಳಿಕ ಅಂತಿಮವಾಗಿ ಶುಕ್ರವಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಆಂಧ್ರದ ಚಿತ್ತೂರು ಮೂಲದ ಪ್ರಾಧ್ಯಾಪಕ ದಂಡು ಘೌಸ್ ಬಾಷಾ (35) ಅವರ ಕುಟುಂಬ ಆಗಸ್ಟ್ 26 ರಂದು ಉಮ್ರಾ ಮುಗಿಸಿ ಕುವೈತ್‌ಗೆ ಮರಳುತ್ತಿದ್ದಾಗ ಭೀಕರ ಅಪಘಾತಕ್ಕೆ ತುತ್ತಾದರು. ದಂಡು ಘೌಸ್ ಪತ್ನಿ ತಬರಕ್ ಸರ್ವಾರ್ (31), ಮಕ್ಕಳಾದ ಮುಹಮ್ಮದ್ ದಮಿಲ್ ಘೌಸ್ (2) ಮತ್ತು ಮುಹಮ್ಮದ್ ಇಹಾನ್ ಘೌಸ್ (4) ಮೃತಪಟ್ಟಿದ್ದಾರೆ. ಈ ಭಯಾನಕ ಅಪಘಾತ ಆಗಸ್ಟ್ 25ರಂದು ನಡೆದಿತ್ತು.
ಡಿಎನ್‌ಎ ಗುರುತಿನ ನಂತರ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ. ಮೃತರ ಸಹೋದರ ಮೃತದೇಹಗಳನ್ನು ಗುರುತಿಸಲು ಡಿಎನ್‌ಎ ಮಾದರಿ ನೀಡುವುದಕ್ಕಾಗಿ ಯುಎಸ್‌ಎಯಿಂದ ಸೌದಿ ಅರೇಬಿಯಾಕ್ಕೆ ಹಾರಿದ್ದರು. ಖ್ಯಾತ ಮಲಯಾಳಿ ಸಮಾಜ ಸೇವಕ ಸಿದ್ದಿಕ್ ತೂವೂರ್ ಅವರು ಅಪಘಾತದ ದಿನದಿಂದ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ಅಂತಿಮ ಕ್ರಿಯೆ ಮಾಡುವವರೆಗೂ ಪ್ರಕರಣವನ್ನು ಫಾಲೋ ಮಾಡಿದ್ದಾರೆ. ಶುಕ್ರವಾರದ ಪ್ರಾರ್ಥನೆಯ ನಂತರ ರಿಯಾದ್‌ನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ತೆಲುಗು ರಾಜ್ಯದ ಅನೇಕರು ಭಾಗವಹಿಸಿದ್ದರು.
ಕುವೈತ್ನ ಅಮೆರಿಕನ್ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದ ದಂಡು ಘೌಸ್ ಬಾಷಾ, ಹೊಸದಾಗಿ ಖರೀದಿಸಿದ ಕಾರಿನಲ್ಲಿ ತಮ್ಮ ಕುಟುಂಬ ಸಮೇತ ಉಮ್ರಾಕ್ಕಾಗಿ ಸೌದಿ ಅರೇಬಿಯಾಕ್ಕೆ ಬಂದರು. ಉಮ್ರಾ ಮುಗಿಸಿ, ಕುಟುಂಬ ಕುವೈತ್‌ಗೆ ಹಿಂದಿರುಗುತ್ತಿದ್ದಾಗ ರಿಯಾದ್‌ನಿಂದ 120 ಕಿಲೋಮೀಟರ್ ದೂರದಲ್ಲಿ ದುರಂತ ಸಂಭವಿಸಿತು.
ಅಂದಹಾಗೆ ದಂಡು ಘೌಸ್ ಬಾಷಾ ಮದುವೆಯ ನಂತರ ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದರು. ಆದರೆ, ಜೀವನ ನಿರ್ವಹಣೆಗಾಗಿ ಕೆಲಸಕ್ಕೆಂದು ಬೆಂಗಳೂರಿನಿಂದ ಕುವೈತ್‌ಗೆ ತೆರಳಿ ಅಲ್ಲಿಯೇ ನೆಲೆಸಿದ್ದರು. ಆದರೆ, ಕೆಲವೇ ತಿಂಗಳಲ್ಲಿ ದುರಂತ ಸಾವಿಗೀಡಾದರು. ಅವರ ಗುರುತು ಪತ್ತೆಯಾಗದ ಕಾರಣ ಘಟನೆ ನಡೆದ ಒಂದು ತಿಂಗಳ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ. (ಏಜೆನ್ಸೀಸ್)