ನವದೆಹಲಿ: ಸಾಮಾನ್ಯ ಮುಂಗಾರು ನಿರೀಕ್ಷೆಗಳು ಮತ್ತು ಇದುವರೆಗೆ ತಿಳಿದಿರುವ ಯಾವುದೇ ಜಾಗತಿಕ ಅಪಾಯಗಳ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ. 7ಕ್ಕಿಂತ ಹೆಚ್ಚಾಗಲಿದ್ದು, ಶೇ. 7.5ಕ್ಕೆ ಸಮೀಪಸಬಹುದಾಗಿದೆ ಎಂದು ಆರ್ಥಿಕ ಚಿಂತಕರ ಚಾವಡಿ ಎನ್ಸಿಎಇಆರ್ ತನ್ನ ಮಾಸಿಕ ವಿಮರ್ಶೆಯಲ್ಲಿ ಹೇಳಿದೆ.
"2024-25 ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆಯು ಶೇ. 7ಕ್ಕಿಂತ ಹೆಚ್ಚು ಮತ್ತು ಶೇ 7.5ಕ್ಕೆ ಹತ್ತಿರವಾಗಬಹುದು" ಎಂದು ಎನ್ಸಿಎಇಆರ್ ಮಹಾ ನಿರ್ದೇಶಕಿ ಪೂನಂ ಗುಪ್ತಾ ಹೇಳಿದ್ದಾರೆ. ಮೊದಲ ತ್ರೈಮಾಸಿಕದಲ್ಲಿ ಕಂಡುಬಂದ ಆರ್ಥಿಕ ಚಟುವಟಿಕೆಯಲ್ಲಿನ ಹೆಚ್ಚಳ, ಹೂಡಿಕೆ, ಬೆಳವಣಿಗೆ, ಸ್ಥೂಲ ಆರ್ಥಿಕ ಸ್ಥಿರತೆ ಮತ್ತು ಸಾಮಾನ್ಯ ಮುಂಗಾರು ನಿರೀಕ್ಷೆಗಳ ಮೇಲೆ ತೀಕ್ಷ್ಣವಾದ ನೀತಿ ಗಮನಹರಿಸುವಿಕೆಯನ್ನು ಈ ಅಂದಾಜು ಆಧರಿಸಿದೆ ಎಂದು ಗುಪ್ತಾ ತಿಳಿಸಿದ್ದಾರೆ.
ಹಣದುಬ್ಬರವು ಉತ್ತುಂಗಕ್ಕೇರಿರುವುದರಿಂದ, ವಿತ್ತೀಯ ನೀತಿಯನ್ನು ಇನ್ನಷ್ಟು ಬಿಗಿಗೊಳಿಸುವುದು ಅಸಂಭವವಾಗಿದೆ. ಆಹಾರದ ಬೆಲೆಗಳನ್ನು ಪಳಗಿಸುವುದು ಸವಾಲಾಗಿ ಉಳಿದಿದೆ ಎಂದು ಗುಪ್ತಾ ಹೇಳಿದರು.
ಈ ತಿಂಗಳ ಆರಂಭದಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ 2024-25ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರವನ್ನು ಶೇ. 7.2ಕ್ಕೆ ನಿಗದಿಪಡಿಸಿದೆ. ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ 12 ತಿಂಗಳ ಕನಿಷ್ಠ ಮಟ್ಟವಾದ ಶೇ. 4.7ಕ್ಕೆ ಇಳಿದಿದೆ. ಆದರೂ ಆಹಾರ ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿದೆ.