ನವದೆಹಲಿ: ಜಾಗತಿಕ ಮಟ್ಟದಲ್ಲಿ ಬಹುತೇಕ ದೇಶಗಳು ಆರ್ಥಿಕವಾಗಿ ಡೋಲಾಯಮಾನ ಸ್ಥಿತಿಯಲ್ಲಿರುವಾಗ ಭಾರತ ಮಾತ್ರ ‘ಸ್ವೀಟ್ ಸ್ಪಾಟ್’ನಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಕೌಟಿಲ್ಯ ಆರ್ಥಿಕ ಸಮಾವೇಶದ 3ನೇ ಆವೃತ್ತಿ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿ ಮಾತನಾಡಿದ ಪ್ರಧಾನಿ, ದೇಶದ ಆರ್ಥಿಕ ವೃದ್ಧಿಯ ಈಗಿನ ದರವನ್ನು ಮುಂದಿನ ದಿನಗಳಲ್ಲಿಯೂ ಕಾಪಾಡಿ ಕೊಳ್ಳುವ ಉದ್ದೇಶದಿಂದ ಹಲವಾರು ಪರಿಣಾಮಕಾರಿ ಬದಲಾವಣೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಪರಿವರ್ತನೆ ಮಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉದ್ಯೋಗಾವಕಾಶ ಹೆಚ್ಚಳ, ಕೌಶಲ್ಯ, ನಿರಂತರ ವೃದ್ಧಿ, ವ್ಯಾಪಕ ವಿಸ್ತರಣೆ ಮುಂತಾದವುಗಳಿಗೆ ಮೋದಿ 3.0 ಅವಧಿಯಲ್ಲಿ ಹೆಚ್ಚು ಗಮನ ನೀಡಲಾಗುತ್ತಿದೆ. ಜಾಗತಿಕ ತುರ್ತಸ್ಥಿತಿಯ ನಡುವೆ ನಾವಿಂದು ‘ಭಾರತೀಯ ಯುಗ’ದ ಬಗ್ಗೆ ರ್ಚಚಿಸುತ್ತಿದ್ದೇವೆ. ಇಡೀ ಜಗತ್ತು ಭಾರತದ ಬಗ್ಗೆ ವಿಶ್ವಾಸ ಇರಿಸಿಕೊಂಡಿರುವುದರ ದ್ಯೋತಕ ಇದು. ಇಡೀ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಭಾರತದ್ದು. ಈಗಾಗಲೇ ಐದನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ್ದೇವೆ ಎಂದು ಮೋದಿ ಹೇಳಿದರು. ಭಾರತ ಈಗ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಎರಡನೇ ಸ್ಥಾನದಲ್ಲಿದೆ. ದ್ವಿಚಕ್ರವಾಹನಗಳು, ಟ್ರ್ಯಾಕ್ಟರ್ಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ಪಾದಿಸುತ್ತಿದೆ ಎಂದರು.
ರೀಫಾಮ್ರ್, ಪರ್ಫಾಮ್ರ್ ಮತ್ತು ಟ್ರಾನ್ಸ್ ಫಾಮ್ರ್ ಎಂಬುದು ಸರ್ಕಾರದ ಮಂತ್ರವಾಗಿದೆ. ಜನರ ಬದುಕು ಪರಿವರ್ತನೆ (ಟ್ರಾನ್ಸ್ಫಾಮ್ರ್) ಆದಾಗ ಅವರು ದೇಶವನ್ನು ನಂಬಲು ಪ್ರಾರಂಭಿಸುತ್ತಾರೆ. ಅದು ಚುನಾವಣೆಯ ಮತದಾನದಲ್ಲಿ ಪ್ರತಿಬಿಂಬಿತವಾಗುತ್ತದೆ. 140 ಕೋಟಿ ಜನರ ವಿಶ್ವಾಸವೇ ನಮ್ಮ ಬಲ ಎಂದು ಮೋದಿ ಹೇಳಿದರು. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆ ಬಲಗೊಂಡಿದೆ. ಗಣಿಗಾರಿಕೆ ಮತ್ತು ರಕ್ಷಣಾ ಕ್ಷೇತ್ರಗಳನ್ನು ಖಾಸಗಿಯವರ ಹೂಡಿಕೆಗೆ ತೆರೆದಿಡಲಾಗಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಮತ್ತಷ್ಟು ಸರಳಗೊಳಿಸಿ ಉತ್ತೇಜನ ನೀಡಲಾಗುತ್ತಿದೆ ಎಂದು ಪ್ರಧಾನಿ ವಿವರಿಸಿದರು.
ಒಟ್ಟಾರೆ ಆರ್ಥಿಕ ಸ್ಥಿತಿ ಅತ್ಯುತ್ತಮವಾಗಿ ರುವ ಕಾಲಘಟ್ಟಕ್ಕೆ ‘ಸ್ವೀಟ್ ಸ್ಪಾಟ್’ ಎಂಬ ಪದವನ್ನು ಅರ್ಥಶಾಸ್ತ್ರಜ್ಞರು ಬಳಸುತ್ತಾರೆ. ಆದಾಯ, ವೆಚ್ಚ ಮತ್ತು ಲಾಭಗಳು ಅತ್ಯಂತ ಸಮತೋಲನ ದಲ್ಲಿರುವುದು ಹಾಗೂ ಅದಕ್ಕೆ ಆರ್ಥಿಕ ವೃದ್ಧಿಯ ಸೂಚ್ಯಂಕ ಮತ್ತು ನೀತಿನಿರೂಪಣೆ ಎರಡೂ ಪೂರಕವಾಗಿರುವುದು - ಈ ಘಟ್ಟವನ್ನೇ ಸ್ವೀಟ್ ಸ್ಪಾಟ್ ಎಂದು ಬಣ್ಣಿಸಲಾಗುತ್ತದೆ. ಈ ಸಮಯದಲ್ಲಿ ಬಡ್ಡಿ ದರಗಳು, ಉದ್ಯೋಗಾವಕಾಶದ ಅಂಕಿ ಅಂಶ ಮುಂತಾದ ಆರ್ಥಿಕ ದತ್ತಾಂಶಗಳೆಲ್ಲವೂ ಸುಸ್ಥಿತಿಯನ್ನು ಸೂಚಿಸುತ್ತಿರುತ್ತವೆ.
ನವದೆಹಲಿ: ಹಬ್ಬದ ಋತುವಿನಲ್ಲಿ ಭಾರತದಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಮತ್ತೊಂದೆಡೆ, ಇಸ್ರೇಲ್-ಇರಾನ್ ನಡುವೆ ಯುದ್ಧದ ಕಾಮೋಡ ಕವಿದಿದ್ದು, ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಗೆ ಕಾರಣವಾಗಿದೆ. ಈಗಾಗಲೇ ಚಿನ್ನದ ಬೆಲೆ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠವಾದ 78,300 ರೂ.ಗಳ ಗಡಿ ದಾಟಿದೆ. ಆದರೆ, ಚಿನ್ನದ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ ಮುಂಬರುವ ದಿನಗಳಲ್ಲಿ ಬಂಗಾರದ ದರ ಮತ್ತಷ್ಟು ಏರಿಕೆ ಆಗಲಿದೆ. ಇದೇ ವರ್ಷದ ಡಿಸೆಂಬರ್ ಹೊತ್ತಿಗೆ 10 ಗ್ರಾಂಗೆ 85 ಸಾವಿರ ರೂ.ಗೆ ತಲುಪುವ ಸಾಧ್ಯತೆ ಇದೆ. 2024ರ ಆರಂಭದಿಂದ ಈವರೆಗೆ ಚಿನ್ನದ ದರ ಶೇಕಡ 19.80ರಷ್ಟು ಏರಿಕೆಯಾಗಿದ್ದು, ಹಬ್ಬದ ಋತುವಿನ ಮೂರು ತಿಂಗಳಲ್ಲೇ (ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್) ಇನ್ನೂ 13%ರಷ್ಟು ಜಿಗಿತ ಕಾಣುವ ಸಾಧ್ಯತೆ ಇದೆ.
ಯುದ್ಧದ ಅವಧಿಯಲ್ಲಿ ಹೆಚ್ಚಳ: ಈ ಹಿಂದೆಯೂ ಯುದ್ಧದ ಸಂದರ್ಭಗಳಲ್ಲಿ ಚಿನ್ನದ ದರದಲ್ಲಿ ಭಾರಿ ಏರಿಕೆ ಕಂಡುಬಂದಿರುವ ನಿದರ್ಶನಗಳಿವೆ. 2022ರ ಫೆಬ್ರವರಿ 24ರಂದು ಯೂಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿತ್ತು. ಮುಂದೆ, ಎರಡೇ ವಾರದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಸರಾಸರಿ 4.55%ರಷ್ಟು ಹೆಚ್ಚಾಗಿತ್ತು. ಆದರೆ, ಭಾರತೀಯ ಮಾರುಕಟ್ಟೆಯಲ್ಲಿ 8.40%ರಷ್ಟು ಏರಿಕೆ ಕಂಡುಬಂದಿತ್ತು.
ಏರಿದ ಬೇಡಿಕೆ: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಚಿನ್ನಕ್ಕೆ ಬೇಡಿಕೆ ಹೆಚ್ಚಿದೆ. ಡಾಲರ್ ಕೂಡ ದುರ್ಬಲಗೊಳ್ಳುತ್ತಿದೆ. ಅಮೆರಿಕ ಆರ್ಥಿಕ ಹಿಂಜರಿತದ ಭೀತಿಯಲ್ಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಏರಿಕೆ ಕಾಣಲಿದ್ದು, ವರ್ಷಾಂತ್ಯದಲ್ಲಿ ಪ್ರತಿ ಔನ್ಸ್ಗೆ 3 ಸಾವಿರ ಡಾಲರ್ನ ಗಡಿ ದಾಟಲಿದೆ ಎನ್ನುತ್ತಾರೆ ತಜ್ಞರು.
ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಸೆಪ್ಟೆಂಬರ್ನಲ್ಲಿ 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಎಚ್ಎಸ್ಬಿಸಿ ಇಂಡಿಯಾ ಸರ್ವಿಸಸ್ನ ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ (ಪಿಎಂಐ) ಆಗಸ್ಟ್ನಲ್ಲಿ 60.9 ದಾಖಲಾಗಿತ್ತು. ಸೆಪ್ಟೆಂಬರ್ನಲ್ಲಿ 57.7ಕ್ಕೆ ಇಳಿದಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾರಾಟ ಮತ್ತು ಉತ್ಪಾದನೆಯು ಮಂದಗತಿಯಲ್ಲಿದೆ. ಆದ್ದರಿಂದ ಸೂಚ್ಯಂಕ ಇಳಿಕೆ ಕಂಡಿದೆ ಎಂದು ಎಸ್ ಆಂಡ್ ಪಿ ಗ್ಲೋಬಲ್ ಸಂಸ್ಥೆಯ ವರದಿ ಶುಕ್ರವಾರ ತಿಳಿಸಿದೆ. ಆದರೆ, ಸೆಪ್ಟೆಂಬರ್ನಲ್ಲಿ ಉದ್ಯೋಗ ಸೃಷ್ಟಿಯು ಸಕಾರಾತ್ಮಕವಾಗಿದೆ ಎಂದು ವರದಿ ಹೇಳಿದೆ.
ನವದೆಹಲಿ: ಈಕ್ವಿಟಿ ಮ್ಯೂಚುವಲ್ ಫಂಡ್ನಲ್ಲಿ ಹೊಸ ಹೂಡಿಕೆದಾರರ ಸಂಖ್ಯೆ ಹೆಚ್ಚುತ್ತಿದೆ. 2024ರ ಏಪ್ರಿಲ್ನಿಂದ ಆಗಸ್ಟ್ನ ಅವಧಿಯಲ್ಲಿ ಮ್ಯೂಚುವಲ್ ಫಂಡ್ನಲ್ಲಿ 2.3 ಕೋಟಿ ಹೊಸ ಹೂಡಿಕೆದಾರರು ಹಣ ಹಾಕಿದ್ದಾರೆ. ಇದರಲ್ಲಿ ಶೇಕಡ 53 ಅಂದರೆ 1.23 ಕೋಟಿ ಹೂಡಿಕೆದಾರರು ಸಣ್ಣ ನಗರಗಳಿಗೆ ಸೇರಿದವರು ಎಂಬುದು ಗಮನಾರ್ಹ. ಈ ಮೊದಲು ಮಹಾನಗರಗಳಿಗೆ ಸೇರಿದವರು ಮಾತ್ರ ಮ್ಯೂಚುವಲ್ ಫಂಡ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಎರಡನೇ ಮತ್ತು ಮೂರನೇ ಹಂತದ ನಗರಗಳ ಜನರು ಹೂಡಿಕೆಗೆ ಮ್ಯೂಚುವಲ್ ಫಂಡ್ನತ್ತ ಆಕರ್ಷಿತರಾಗಿದ್ದಾರೆ. ಅದರಲ್ಲೂ, ಬಹುತೇಕರು ಎಸ್ಐಪಿ ಆಯ್ಕೆಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಆಗಸ್ಟ್ ತಿಂಗಳೊಂದರಲ್ಲೇ ಮ್ಯೂಚುವಲ್ ಫಂಡ್ನಲ್ಲಿ 38,239 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದೆ. ಎಸ್ಐಪಿ ಮೂಲಕ 23,547 ಕೋಟಿ ರೂ. ಹೂಡಿಕೆಯಾಗುವುದರೊಂದಿಗೆ 2024ರ ಆಗಸ್ಟ್ನಲ್ಲಿ ಮ್ಯೂಚುವಲ್ ಫಂಡ್ನಲ್ಲಿ ಒಟ್ಟಾರೆ 1.08 ಲಕ್ಷ ಕೋಟಿ ರೂ. ಹೂಡಿಕೆಯಾಗಿದೆ.