ನವದೆಹಲಿ: ಭಾರತದಲ್ಲಿ ಆಕ್ಸ್ಫರ್ಡ್ ವಿವಿಯ ಕರೊನಾ ಲಸಿಕೆ ಉತ್ಪಾದನೆಗೆ ಪರವಾನಗಿ ಪಡೆದು ಕ್ಲಿನಿಕಲ್ ಟ್ರಯಲ್ ನಡೆಸುತ್ತಿರುವ ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ನೋಟಿಸ್ ನೀಡಿದೆ.
ಬ್ರಿಟನ್ನಲ್ಲಿ ಈ ಲಸಿಕೆಯ ಮೂರನೇ ಹಂತದ ಪರೀಕ್ಷೆ ನಡೆಯುತ್ತಿದೆ. ಈ ವೇಳೆ ಲಸಿಕೆ ಪಡೆದ ವ್ಯಕ್ತಿಯೊಬ್ಬರಿಗೆ ಗಂಭೀರ ಅಡ್ಡ ಪರಿಣಾಮ ಉಂಟಾದ ಕಾರಣ ನಾಲ್ಕು ದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ಈ ವಿಷಯವನ್ನು ತಮ್ಮ ಗಮನಕ್ಕೇಕೆ ತಂದಿಲ್ಲ ಹಾಗೂ ಕ್ಲಿನಿಕಲ್ ಟ್ರಯಲ್ ಏಕೆ ನಿಲ್ಲಿಸಿಲ್ಲ ಎಂದು ನೋಟಿಸ್ನಲ್ಲಿ ಕೇಳಲಾಗಿದೆ.
ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಈ ಪರೀಕ್ಷೆಯನ್ನೇಕೆ ಮುಂದುವರಿಸುತ್ತಿದೆ? ಕ್ಲಿನಿಕಲ್ ಟ್ರಯಲ್ ವೇಳೆ ಉಂಟಾದ ಪರಿಣಾಮಗಳ ಬಗ್ಗೆ ವಿಸ್ತೃತ ವರದಿಯನ್ನೇಕೆ ನೀಡಿಲ್ಲ ಎಂದು ನೋಟಿಸ್ನಲ್ಲಿ ಪ್ರಶ್ನಿಸಲಾಗಿದೆ. ಭಾರತದಲ್ಲಿ ಈ ಲಸಿಕೆಯನ್ನು ಕೋವಿಶೀಲ್ಡ್ ಎಂದು ಕರೆಯಲಾಗುತ್ತಿದೆ. ಜತೆಗೆ ಎರಡನೇ ಹಾಗೂ ಮೂರನೇ ಹಂತದ ಪರೀಕ್ಷೆಗೆ ಒಪ್ಪಿಗೆ ನೀಡಲಾಗಿದೆ. ಇದಕ್ಕಾಗಿ ಮೈಸೂರು ಸೇರಿ 17ಕ್ಕೂ ಅಧಿಕ ಕಡೆಗಳಲ್ಲಿ 1,600ಕ್ಕೂ ಅಧಿಕ ಜನರ ಮೇಲೆ ಇದನ್ನು ಪ್ರಯೋಗಿಸಲಾಗುತ್ತಿದೆ.
ನಮಗೆ ಈವರೆಗೂ ಟ್ರಯಲ್ ನಿಲ್ಲಿಸುವಂತೆ ಆದೇಶಗಳು ಬಂದಿಲ್ಲ. ಔಷಧ ಮಹಾನಿಯಂತ್ರಕರ ಸೂಚನೆಗಳನ್ನು ಪಾಲನೆ ಮಾಡಲಾಗುತ್ತದೆ.ಒಂದು ವೇಳೆ ಸುರಕ್ಷತೆ ಬಗ್ಗೆ ಅವರಿಗೆ ಆತಂಕಗಳಿದ್ದರೆ ನಿವಾರಿಸಲಾಗುವುದು ಜತೆಗೆ, ನಿಗದಿತ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂದು ಸಿರಂ ಇನ್ಸ್ಟಿಟ್ಯೂಟ್ ಮಾಹಿತಿ ನೀಡಿದೆ.
ಇದನ್ನೂ ಓದಿ; ಆಕ್ಸ್ಫರ್ಡ್ ವಿವಿ ಕರೊನಾ ಲಸಿಕೆ ಕ್ಲಿನಿಕಲ್ ಟ್ರಯಲ್ ಸ್ಥಗಿತ; ಲಸಿಕೆ ಪಡೆದ ವ್ಯಕ್ತಿಗೆ ಏನಾಗಿದೆ..?
ಕೋವಿಶೀಲ್ಡ್ ಲಸಿಕೆ ವರ್ಷಾಂತ್ಯಕ್ಕೆ ಭಾರತದಲ್ಲಿ ಲಭ್ಯವಾಗುವ ನಿರೀಕ್ಷೆಯಿತ್ತು ಜತೆಗೆ, ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ 225 ರೂ.ಗೆ ನೀಡಲು ಉದ್ದೇಶಿಸಲಾಗಿತ್ತು. ಆದರೆ, ಈಗ ಕೊಂಚ ಆತಂಕ ಮನೆ ಮಾಡಿರುವುದಂತೂ ಸತ್ಯ.