ನವದೆಹಲಿ: ತೀವ್ರ ಕೋವಿಡ್ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಕೌಟುಂಬಿಕ ಇತಿಹಾಸ ಮತ್ತು ಜೀವನಶೈಲಿ ಹಠಾತ್ ಸಾವಿನ ಹಿಂದಿರುವ ಕಾರಣಗಳು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟವಾಗಿರುವ ಪೀರ್ ರಿವ್ಯೂಡ್ ಅಧ್ಯಯನ ವರದಿಯಲ್ಲಿ ದೇಶದಲ್ಲಿ 18-45 ವರ್ಷ ವಯಸ್ಸಿನವರಲ್ಲಿ ವಿವರಿಸಲಾಗದ ಹಠಾತ್ ಸಾವುಗಳಿಗೆ ಸಂಬಂಧಿಸಿದ ಕಾರಣಗಳ ಕುರಿತು ವಿವರಿಸಲಾಗಿದೆ. ಈ ವರದಿಯಲ್ಲಿ ಯುವಜನತೆ ಮತ್ತು ಆರೋಗ್ಯವಂತ ವ್ಯಕ್ತಿಗಳಲ್ಲಿ ಕಂಡು ಬರುವ ಹಠಾತ್ ಮತ್ತು ವಿವರಿಸಲಾಗದ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ತಿಳಿಸಿದೆ. ಈ ಅಧ್ಯಯನವನ್ನು 2021ರ ಅಕ್ಟೋಬರ್ ನಿಂದ 2023ರ ಮಾರ್ಚ್ ಅವಧಿಯಲ್ಲಿ ನಡೆಸಲಾಗಿದ್ದು, ಮಲ್ಟಿ ಸೆಂಟ್ರಿಕ್ ಕೇಸ್ ಕಂಟ್ರೋಲ್ ಮಾಡಲ್ ಅನ್ನು ಬಳಸಿ ಭಾರತದಾದ್ಯಂತ 47 ಆಸ್ಪತ್ರೆಗಳಲ್ಲಿ 729 ಪ್ರಕರಣಗಳು ಮತ್ತು 2916 ಕಂಟ್ರೋಲ್ ಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅಧ್ಯಯನ ನಡೆಸಲಾದ ವ್ಯಕ್ತಿಗಳೂ 18-45 ವರ್ಷ ವಯೋಮಾನದವರಾಗಿದ್ದು, ಇವರಿಗೆ ಯಾವುದೇ ಆರೋಗ್ಯದ ಸಮಸ್ಯೆ ಇರಲಿಲ್ಲ. ಜತೆಗೆ ಸಾವಿಗೂ 24 ಗಂಟೆ ಮೊದಲು ಯಾವುದೇ ಅನಾರೋಗ್ಯದ ಲಕ್ಷಣಗಳೂ ಕಂಡು ಬಂದಿರಲಿಲ್ಲ ಎಂದು ಅಧ್ಯಯನ ತಿಳಿಸಿದೆ.
ಹಠಾತ್ ಕುಸಿದು ಮೃತಪಟ್ಟವರು ಕೋವಿಡ್ ಲಸಿಕೆ ಪಡೆದ ವಿವರ, ಕೋವಿಡ್ ಬಳಿಕದ ಅವರ ಆರೋಗ್ಯದ ಸ್ಥಿತಿ, ಹಠಾತ್ ಸಾವಿನ ಕುರಿತು ಅವರ ಕುಟುಂಬದ ಇತಿಹಾಸ, ಧೂಮಪಾನ, ಮಾದಕ ವಸ್ತು ಬಳಕೆ, ಮದ್ಯಪಾನ ಮತ್ತು ಅತಿಯಾದ ಮದ್ಯಪಾನ ಹಾಗೂ ಸಾವಿಗೂ ಹಿಂದಿನ ಎರಡು ದಿನ ಅವರು ತೀವ್ರ ದೈಹಿಕ ಚಟುವಟಿಕೆ ನಡೆಸಿದ್ದರೆ ಎಂಬ ಕುರಿತು ಮಾಹಿತಿ ಕಲೆ ಹಾಕಲಾಗಿತ್ತು. ಈ ಮಾಹಿತಿಗಳ ಅಧ್ಯಯನದಿಂದ ಕೋವಿಡ್-19 ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆಯುವುದರಿಂದ ಹಠಾತ್ ಸಾವಿನ ಸಾಧ್ಯತೆ ಕಡಿಮೆಯಾಗುತ್ತದೆ ಎಂಬುದು ತಿಳಿದು ಬಂದಿದೆ. ಇದೇ ವೇಳೆ ಕೋವಿಡ್ ಬಳಿಕ ಆಸ್ಪತ್ರೆಗೆ ದಾಖಲಾಗಿರುವುದು ಸಾವಿಗೂ 48 ಗಂಟೆ ಮೊದಲು ಅತಿಯಾದ ಮದ್ಯಪಾನ, ಮಾದಕ ವಸ್ತುವಿನ ಬಳಕೆ, ತೀವ್ರ ದೈಹಿಕ ಚಟುವಟಿಕೆ ನಡೆಸಿರುವುದು ಸಾವಿಗೆ ಕಾರಣವಾಗಿರುವ ಸಾಧ್ಯತೆಗಳಿದೆ ಎಂಬುದು ತಿಳಿದು ಬಂದಿದೆ.