ನ್ಯೂಸ್

ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆಯ ಪ್ರತ್ಯುತ್ತರ: ಭಾರತೀಯ ಸೈನಿಕರ ಕ್ರಮ ಬೆಂಬಲಿಸಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ |Operation Sindoor

ಯಲಹಂಕ : ಏಪ್ರಿಲ್ 22ರಂದು ಅಮಾಯಕ ಪ್ರವಾಸಿಗರ ಮೇಲೆ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಭಾರತೀಯ ಸೇನೆ ಮಂಗಳವಾರ ಮಧ್ಯರಾತ್ರಿ (Operation Sindoor) ಪ್ರತ್ಯುತ್ತರ ನೀಡಿದ್ದು, ಉಗ್ರರ ಒಂಬತ್ತು ಅಡಗು ತಾಣಗಳ ಮೇಲೆ ಯಶಸ್ವಿ ದಾಳಿ ನಡೆಸಿರುವ ಭಾರತೀಯ ಸೇನೆಯ ಕ್ರಮವನ್ನು ಬೆಂಬಲಿಸಿ ಯಲಹಂಕ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಶಾಸಕ ಎಸ್ ಆರ್ ವಿಶ್ವನಾಥ್ ಅವರ ನೇತೃತ್ವದಲ್ಲಿ ಸಿಂಗನಾಯಕನಹಳ್ಳಿಯಲ್ಲಿ ಸಂಭ್ರಮ ಆಚರಿಸಿದರು.

ಈ ವೇಳೆ ಶಾಸಕ ಎಸ್ ಆರ್ ವಿಶ್ವನಾಥ್ ಮಾತನಾಡಿ 'ಆಪರೇಷನ್ ಸಿಂಧೂರ ಮೂಲಕ ಭಾರತೀಯ ಸೇನೆ ಪಾಕಿಸ್ತಾನಿ ಉಗ್ರರ ಒಂಬತ್ತು ಅಡಗು ತಾಣಗಳ ಮೇಲೆ ನಡೆಸಿರುವ ಯಶಸ್ವಿ ದಾಳಿಯನ್ನು ಸ್ವಾಗತಿಸುತ್ತೇವೆ. ಈ ಮೂಲಕ ಉಗ್ರರಿಂದ ಹತರಾದ ಅಮಾಯಕರ ಆತ್ಮಗಳಿಗೆ ಶಾಂತಿ ದೊರೆತಂತಾಗಿದೆ. ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಚಟುವಟಿಕೆಯನ್ನು ಬಲಿ ಹಾಕುವ ದಿಸೆಯಲ್ಲಿ ಎಂತಹ ಸಂಕಷ್ಟ ಎದುರಾದರೂ ಸಹ ನಾವು ಸೈನಿಕರನ್ನು ಬೆಂಬಲಿಸಬೇಕು, ದೇಶದೊಟ್ಟಿಗೆ ನಿಲ್ಲಬೇಕು. ಉಗ್ರರ ಅಡಗು ತಾಣಗಳ ಮೇಲಿನ ಈ ದಾಳಿ ಸಕಾಲಿಕವಾದ ಕ್ರಮವಾಗಿದ್ದು, ಭಾರತೀಯ ಸೇನೆಯ ಈ ಕ್ರಮಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ. ಉಗ್ರಗಾಮಿ ಚಟುವಟಿಕೆಯನ್ನು ಮಟ್ಟ ಹಾಕುವ ದಿಸೆಯಲ್ಲಿ ಪಾಕಿಸ್ತಾನದ ವಿರುದ್ಧ ಸಾರಿರುವ ಯುದ್ಧದಲ್ಲಿ ಭಾರತ ಯಶಸ್ವಿಯಾಗಿ ಗೆಲುವು ಸಾಧಿಸಬೇಕು ಎಂಬ ಆಶಯದೊಂದಿಗೆ ಮುಂದಿನ ದಿನಗಳಲ್ಲಿ ನಮ್ಮ ಸೈನಿಕರ ಸುರಕ್ಷತೆ‌ ಕೋರಿ ಪ್ರತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸ ಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ಎಸ್ ಎನ್ ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಬಿಜೆಪಿ ಮುಖಂಡರಾದ ವಸಂತ್ ಅರಕೆರೆ, ಕೆ.ಆರ್.ತಿಮ್ಮೇಗೌಡ, ಈಶ್ವರಾಚಾರ್, ಎ.ತಿಮ್ಮರಾಯಿಗೌಡ, ಪವನ್ ಕುಮಾರ್, ಕೆ.ಎಂ.ಅರಸೇಗೌಡ, ಸುರಧೇನುಪುರ ರಾಜಣ್ಣ, ಮಂಜುನಾಥ್, ನವೀನ್(ತಂಬಿ), ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಎಚ್ ಎಸ್ ಕಿರಣ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರಿದ್ದರು.