ಆರಗ ಜ್ಞಾನೇಂದ್ರ 
ನ್ಯೂಸ್

ಭಾರತೀಯ ಸೇನೆಯಿಂದ ಪ್ರತ್ಯುತ್ತರ

ಶಿವಕುಮಾರ ಎಸ್.ಪಿ.

ತೀರ್ಥಹಳ್ಳಿ: ಪಹಲ್ಗಾಮ್‌ನಲ್ಲಿ ನಡೆದಿದ್ದ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಉಡಾಯಿಸಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಆರಗ ಜ್ಞಾನೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೇಳಿಕೆ ನೀಡಿರುವ ಅವರು, ಭಾರತ ಚಿಕ್ಕ ಅವಮಾನವನ್ನೂ ಸಹಿಸುವುದಿಲ್ಲ. ಇದಕ್ಕೆ ಸರಿಯಾದ ಪ್ರತ್ಯುತ್ತರ ನೀಡುತ್ತದೆ ಎಂಬುದನ್ನು ನಮ್ಮ ಸೇನೆ ತೋರಿಸಿದೆ. ಸಮರ್ಥ ನೇತೃತ್ವ ಮತ್ತು ಮಿಲಿಟರಿ ಇದ್ದರೆ ಏನಾಗುತ್ತದೆ ಎಂಬುದಕ್ಕೆ ಇದು ಸರಿಯಾದ ಉದಾಹರಣೆ. ಜಮ್ಮು ಕಾಶ್ಮೀರ ಭಾರತಮಾತೆಯ ತಿಲಕವಿದ್ದಂತೆ. ಪಹಲ್ಗಾಮ್‌ನಲ್ಲಿ ದಾಳಿ ನಡೆಸಿ 26 ಮಂದಿ ಪುರುಷರನ್ನು ಕೊಲ್ಲುವ ಮೂಲಕ ಮಹಿಳೆಯರ ತಿಲಕವನ್ನು ಅಳಿಸಿರುವ ಘಟನೆಗೆ ಸರಿಯಾದ ಉತ್ತರ ನೀಡಿದಂತಾಗಿದೆ. ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರಿಂದ ದೇಶಕ್ಕೆ ಎದುರಾಗಿರುವ ಸವಾಲನ್ನು ಜಾತಿ, ಧರ್ಮ ಹಾಗೂ ಪಕ್ಷ ಮೀರಿ ಭಾರತೀಯರಾದ ನಾವು ಎದುರಿಸಬೇಕಿದೆ. ಸೈನಿಕರ ಬೆಂಬಲಕ್ಕೆ ನಿಲ್ಲುವ ಮೂಲಕ ದೇಶದ ರಕ್ಷಣೆಗೆ ಮುಂದಾಗಬೇಕಿದೆ ಎಂದು ತಿಳಿಸಿದ್ದಾರೆ.