ನ್ಯೂಸ್

ಕ್ಯಾಲಿಫೋರ್ನಿಯ ಚುನಾವಣಾ ಕಣಕ್ಕೆ ಭಾರತೀಯ ಅಮೆರಿಕನ್​ ಮಹಿಳೆ

ಕ್ಯಾಲಿಫೋರ್ನಿಯ : ಇಂಡಿಯನ್ ಅಮೇರಿಕನ್​ ಮಹಿಳೆಯೊಬ್ಬರು ಅಮೆರಿಕದ ಹೌಸ್​ ಆಫ್​ ರೆಪ್ರಸೆಂಟೆಟೀವ್ಸ್​ ಸದಸ್ಯತ್ವಕ್ಕಾಗಿ ಕ್ಯಾಲಿಫೋರ್ನಿಯಾದ ಜಿಲ್ಲೆಯೊಂದರ ಚುನಾವಣಾ ಕಣಕ್ಕೆ ಇಳಿಯುತ್ತಿದ್ದಾರೆ. ಕ್ಯಾಲಿಫೋರ್ನಿಯಾದ ರಿವರ್​ಸೈಡ್​ನ ನಿವಾಸಿಯಾಗಿರುವ ಉದ್ಯಮಿ ಶ್ರೀನಾ ಕುರಾನಿ, ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.

ಶ್ರೀನಾ ತಂದೆ-ತಾಯಿ ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿ, ಹಲವು ವರ್ಷಗಳಿಂದ ರಿವರ್​ಸೈಡ್​ನಲ್ಲಿ ಪೂಲ್​ ಸಪ್ಲೈ ಬಿಸಿನೆಸ್​ನಲ್ಲಿ ತೊಡಗಿದ್ದಾರೆ. ಅಮೆರಿಕದ ನಾಗರೀಕಳಾಗಿರುವ ಶ್ರೀನಾ ಒಬ್ಬ ಮೆಕಾನಿಕಲ್ ಇಂಜಿನಿಯರ್​ ಆಗಿದ್ದು, ಹಲವು ಜನರಿಗೆ ಉದ್ಯೋಗ ನೀಡಿರುವ ಉದ್ಯಮಿ ಸಹ ಆಗಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಮಧ್ಯಕಾಲೀನ ಚುನಾವಣೆಯಲ್ಲಿ, ರಿಪಬ್ಲಿಕನ್ ಪಾರ್ಟಿಯ ಹಿರಿಯ ಸದಸ್ಯ ಕೆನ್​ ಕಾಲ್ವರ್ಟ್​ ವಿರುದ್ಧ ಸೆಣೆಸಲಿಚ್ಛಿಸಿದ್ದಾರೆ.

"ಕೆನ್ ಕಾಲ್ವರ್ಟ್​ ಅವರು 30 ವರ್ಷಗಳಿಂದ ನಮ್ಮ ಪ್ರತಿನಿಧಿಯಾಗಿದ್ದಾರೆ. ಈಗ ಹೊಸತನಕ್ಕೆ ಸಮಯ ಬಂದಿದೆ. ವಾಷಿಂಗ್ಟನ್​ನಲ್ಲಿ ನಮ್ಮ ಪ್ರದೇಶಕ್ಕೆ ಉತ್ತಮ ಪ್ರಾತಿನಿಧ್ಯ ದೊರಕಿಸಬೇಕು. ಜನರಿಗೆ ಆರೋಗ್ಯಕರ, ಸುರಕ್ಷಿತ ವಾತಾವರಣದಲ್ಲಿ ಉತ್ತಮ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳಲು ಪೂರಕ ಪರಿಸರ ನಿರ್ಮಿಸಬೇಕು ಎಂಬ ಆಶಯ ನನ್ನದು" ಎಂದಿದ್ದಾರೆ, ಶ್ರೀನಾ ಕುರಾನಿ. (ಏಜೆನ್ಸೀಸ್)