ನ್ಯೂಸ್

'ನಾವು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ': ಸಿಎಂ ಯೋಗಿ

ಉತ್ತರಪ್ರದೇಶ: ‘ಏಕ್ ಭಾರತ್, ಶ್ರೇಷ್ಠ ಭಾರತ’ಕ್ಕಾಗಿ ಪ್ರತಿಯೊಬ್ಬರೂ ನಾಗರಿಕ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕಾಗುತ್ತದೆ, ಎಲ್ಲರೂ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಮಾತ್ರ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ 'ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ'ಯಲ್ಲಿ ಭಾಗವಹಿಸಿದ ಸಿಎಂ ಯೋಗಿ, ಜನರು ಗುಲಾಮಗಿರಿಯ ಮನಸ್ಥಿತಿಯಿಂದ ಹೊರಬರಬೇಕೆಂದು ಮನವಿ ಮಾಡಿದರು. ಜತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ಈ ವೇಳೆ ಮಾತನಾಡಿದ ಆದಿತ್ಯನಾಥ್, "ಏಕ ಭಾರತ, ಶ್ರೇಷ್ಠ ಭಾರತಕ್ಕಾಗಿ ನಾವು ಏಕತೆ ಮತ್ತು ಒಗ್ಗಟ್ಟಿನಿಂದ ಮತ್ತು ನಾಗರಿಕ ಕರ್ತವ್ಯ ಪ್ರಜ್ಞೆಯಿಂದ ಕೆಲಸ ಮಾಡಬೇಕು. ನಾವು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದರೆ ಮಾತ್ರ ಭಾರತ ಅಭಿವೃದ್ಧಿ ಹೊಂದುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಳೆದ ಒಂಬತ್ತೂವರೆ ವರ್ಷಗಳಲ್ಲಿ ಪ್ರತಿಯೊಬ್ಬರೂ ನವ ಭಾರತವನ್ನು ನೋಡುತ್ತಿದ್ದಾರೆ. ಅದರಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ" ಎಂದು ಹೇಳಿದರು.

"ಕೇವಲ ಒಂಬತ್ತೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ನಾಲ್ಕು ಕೋಟಿ ಬಡವರಿಗೆ ಉಚಿತ ವಸತಿ ಸೌಲಭ್ಯವನ್ನು ಒದಗಿಸಿದ್ದು, ಇದರೊಂದಿಗೆ ಶೌಚಾಲಯಗಳು, ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕಗಳು, ಪಡಿತರ, ಉಚಿತ ವೈದ್ಯಕೀಯ ಚಿಕಿತ್ಸೆ ಮತ್ತು ಉಚಿತ ಕೋವಿಡ್ ಲಸಿಕೆ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ" ಎಂದು ಹೇಳಿದರು,(ಏಜೆನ್ಸೀಸ್).