ನ್ಯೂಸ್

ಪ್ಯಾಂಗಾಂಗ್​ ತ್ಸೊಗೆ ಹೆಚ್ಚಿನ ಸಾಮರ್ಥ್ಯದ ಸ್ಟೀಲ್​ ಬೋಟ್​ಗಳನ್ನು ರವಾನಿಸಲು ಭಾರತದ ಸಿದ್ಧತೆ

ನವದೆಹಲಿ: ಬಲಕ್ಕೆ ಬಲ ಎಂಬ ಸಿದ್ಧಾಂತಕ್ಕೆ ಅನುಸರಿಸುತ್ತಿರುವ ಭಾರತ, ಲಡಾಖ್​ನ ಪೂರ್ವಭಾಗದ ವಾಸ್ತವ ಗಡಿರೇಖೆಯ ಬಳಿ ಚೀನಾದ ಪ್ರಚೋದನಾಕರಿ ಚಟುವಟಿಕೆಗೆ ತಕ್ಕ ಉತ್ತರ ನೀಡಲು ಪ್ಯಾಂಗಾಂಗ್​ ತ್ಸೊ ಸರೋವರದಲ್ಲಿ ಕಾರ್ಯಾಚರಿಸಲು ಅನುವಾಗುವಂತೆ ಹೆಚ್ಚಿನ ಸಾಮರ್ಥ್ಯದ ಸ್ಟೀಲ್​ ಬೋಟ್​ಗಳನ್ನು ರವಾನಿಸುತ್ತಿದೆ.

ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ಶಕ್ತಿಶಾಲಿಯಾದ 928 ಬಿ ಎಂಬ ಬೋಟುಗಳನ್ನು ಬಳಸಿ ಪ್ಯಾಂಗಾಂಗ್​ ತ್ಸೊ ಸರೋವರದಲ್ಲಿ ಗಸ್ತು ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚೀನಾದ ಆ ಬೋಟುಗಳ ಸಾಮರ್ಥ್ಯಕ್ಕೆ ತಕ್ಕುದಾದ. ಲೈನ್​ ಸರ್ವಿಲೆನ್ಸ್​ ಸಾಮರ್ಥ್ಯದ ಸ್ಟೀಲ್ ಬೋಟ್​ಗಳನ್ನು ಭಾರತ ಲಡಾಖ್​ಗೆ ರವಾನಿಸುತ್ತಿದೆ.

ತುಂಬಾ ಭಾರವಾಗಿರುವ ಸ್ಟೀಲ್​ ಬೋಟ್​ಗಳನ್ನು ಅತಿಹೆಚ್ಚು ಭಾರದ ಸರಕುಗಳನ್ನು ಸಾಗಿಸುವ ಯುದ್ಧವಿಮಾನದಲ್ಲಿ ಲಡಾಖ್​ಗೆ ರವಾನಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಸಿ-17 ಹೆವಿ ಲಿಫ್ಟ್​ ಟ್ರಾನ್ಸ್​ಪೋರ್ಟರ್ಸ್​ ವಿಮಾನವನ್ನು ಬಳಸುವ ಬಗ್ಗೆ ಭಾರತೀಯ ನೌಕಾಪಡೆ ಮತ್ತು ವಾಯುಪಡೆ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಪೂರ್ವ ಲಡಾಖ್​ನ ಪ್ಯಾಂಗಾಂಗ್​ ತ್ಸೊ ಸರೋವರದ ಎರಡೂ ತಟಗಳನ್ನು ತನಗೆ ಬಿಟ್ಟುಕೊಡುವಂತೆ ಚೀನಾದ ಸೇನಾಪಡೆ ಭಾರತದ ಮೇಲೆ ಒತ್ತಡ ಹೇರುತ್ತಿದೆ. ತನ್ಮೂಲಕ ಅದು ತಮ್ಮ ಮೇಲೆ ದಾಳಿ ಮಾಡುವಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಉದ್ದೇಶಪೂರ್ವಕವಾಗಿ ಪ್ರಚೋದಿಸುತ್ತಿದೆ.
ಚುಶುಲ್​ನಲ್ಲಿ ಮಂಗಳವಾರ ರಾತ್ರಿ ತಡರಾತ್ರಿವರೆಗೂ ನಡೆದ ಹಿರಿಯ ಮಿಲಿಟರಿ ಕಮಾಂಡರ್​ ಮಟ್ಟದ ಮಾತುಕತೆ ಸೌಹಾರ್ದಯುತವಾಗಿ ನಡೆಯಿತು ಎನ್ನಲಾಗಿದೆ. ಲೇಹ್​ ಕೋರ್ ಕಮಾಂಡರ್​ ಮತ್ತು ಚೀನಾದ ಕ್ಸಿನ್​ಜಿಯಾಂಗ್​ ಮಿಲಿಟರಿ ಡಿಸ್ಟ್ರಿಕ್ಟ್​ನ ಕಮಾಂಡರ್​ ಪಾಲ್ಗೊಂಡಿದ್ದ ಈ ಮಾತುಕತೆಯಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ತಣಿಸುವುದು, 3,488 ಕಿ.ಮೀ. ಉದ್ದದ ವಾಸ್ತವ ಗಡಿರೇಖೆಯ ಉದ್ದಕ್ಕೂ ನಿಯೋಜಿಸಿರುವ ಯೋಧರನ್ನು ಹಿಂಪಡೆಯುವ ಕುರಿತು ಸುದೀರ್ಘ ಚರ್ಚೆಗಳು ನಡೆದವು ಎನ್ನಲಾಗಿದೆ.

ಬಗಲಲ್ಲೇ ದಂಡ ಇಟ್ಟುಕೊಂಡು ಶಾಂತಿ ಮಂತ್ರ ಜಪಿಸುತ್ತಿರುವ ಚೀನಾ ಪ್ರತಿಕ್ಷಣವೂ ಭಾರತೀಯ ಯೋಧರನ್ನು ಪ್ರಚೋದಿಸುತ್ತಲೇ ಇದೆ. ವಾಸ್ತವವಾಗಿ ಹೇಳಬೇಕೆಂದರೆ, 1,597 ಕಿ.ಮೀ. ಉದ್ದದ ವಾಸ್ತವ ಗಡಿರೇಖೆಯ ನಾಲ್ಕು ಕಡೆಗಳಲ್ಲಿ ಭಾರಿ ಪ್ರಮಾಣದ ಸೇನೆಯನ್ನು ನಿಯೋಜಿಸಿದೆ. ಜತೆಗೆ ಗೊಗ್ರಾ ಪಾಯಿಂಟ್​ನಲ್ಲಿ ರಸ್ತೆಯನ್ನು, ಹಾಟ್​ಸ್ಪ್ರಿಂಗ್ಸ್​ನಲ್ಲಿ ಸಂವಹನ ಸೌಲಭ್ಯಗಳ ಉನ್ನತೀಕರಣ ಮತ್ತು ಪ್ಯಾಂಗಾಂಗ್​ ತ್ಸೊ ಸರೋವರದ ಸುತ್ತಮತ್ತ ಭಾರಿ ಪ್ರಮಾಣದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುತ್ತಿದೆ. ತನ್ಮೂಲಕ ಏಪ್ರಿಲ್​ ಅವಧಿಯಲ್ಲಿ ಈ ಪ್ರದೇಶದಲ್ಲಿ ಇದ್ದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವ ಉದ್ದೇಶ ತನಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಒಟ್ಟಾರೆ ಅದು, ಭಾರತೀಯ ಯೋಧರನ್ನು ಯುದ್ಧಕ್ಕೆ ಪ್ರಚೋದಿಸುವ ಮೂಲಕ ಭಾರತದ ಭೂಮಿಯನ್ನು ಸಾಕಷ್ಟು ಪ್ರಮಾಣದಲ್ಲಿ ಅತಿಕ್ರಮಿಸಿಕೊಳ್ಳುವ ಇರಾದೆ ಹೊಂದಿದೆ ಎಂದು ಹೇಳಬಹುದಾಗಿದೆ.

ಲಡಾಖ್​ನಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಲು ಭಾರತೀಯ ಸೇನಾಪಡೆಗೆ ಮೋದಿ ಸರ್ಕಾರ ಸಂಪೂರ್ಣ ಅಧಿಕಾರ ನೀಡಿದೆ. ಹೀಗಿದ್ದರೂ ವಾಸ್ತವ ಗಡಿರೇಖೆ ಕುರಿತು ಇರುವ ವಿವಾದವನ್ನು ಶಾಶ್ವತ ಸಮಸ್ಯೆಯನ್ನಾಗಿಸಲು ಚೀನಾ ಹುನ್ನಾರ ನಡೆಸುತ್ತಿದೆ. ಭಾರತೀಯ ಸೇನಾಪಡೆ, ವಾಯುಪಡೆ ಯೋಧರು ಅತ್ಯಂತ ತಾಳ್ಮೆಯಿಂದ, ಪಿಎಲ್​ಎ ಕಡೆಯಿಂದ ಬರಬಹುದಾದ ಆಕ್ರಮಣವನ್ನು ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿ ನಿಂತಿದ್ದಾರೆ. ವಾಸ್ತವ ಗಡಿರೇಖೆಯಲ್ಲಿ ಏಪ್ರಿಲ್​ನಂತೆ ಯಥಾಸ್ಥಿತಿ ನೆಲೆಸುವವರೆಗೂ 2001ರ ಆಪರೇಷನ್​ ಪರಾಕ್ರಮ್​ಗೆ ಸಜ್ಜಾದ ರೀತಿಯಲ್ಲೇ ಭಾರತೀಯ ವಾಯುಪಡೆ ಸನ್ನದ್ಧತಾ ಸ್ಥಿತಿಯಲ್ಲೇ ಇರಲಿದೆ.