ರೋಮ್: ಜಾಗತಿಕ ಆರೋಗ್ಯ ಸಂಕಷ್ಟವನ್ನು ಎದುರಿಸುತ್ತಿರುವ ಈ ಸನ್ನಿವೇಶದಲ್ಲಿ "ಒಂದು ಭೂಮಿ; ಒಂದು ಆರೋಗ್ಯ'' ಎಂಬ ದೃಷ್ಟಿಕೋನ ಹೊಂದಿರಬೇಕಾದ್ದು ಅವಶ್ಯ ಎಂಬ ಆಶಯವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದರು.
ಅವರು ಶನಿವಾರ ರೋಮ್ನಲ್ಲಿ ಜಿ20 ರಾಷ್ಟ್ರಗಳ 16ನೇ ಶೃಂಗವನ್ನು ಉದ್ದೇಶಿಸಿ ಮಾತನಾಡಿದರು. ಅವರ ಭಾಷಣದ ಸಾರವನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ಸುದ್ದಿಗಾರರಿಗೆ ವಿವರಿಸಿದರು. ಕೋವಿಡ್ ಸಂಕಷ್ಟವನ್ನು ಎದುರಿಸುವುದಕ್ಕಾಗಿ ಜಗತ್ತಿನ ನೆರವಿನೊಂದಿಗೆ ಮುಂದಿನ ವರ್ಷದ ಕೊನೆಯ ಹೊತ್ತಿಗೆ 500 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಉತ್ಪಾದಿಸಿ ಕೊಡಲು ಭಾರತ ಸಿದ್ಧವಿದೆ. ಮಾರಣಾಂತಿಕ ಸೋಂಕಿನ ವಿರುದ್ಧ ಹೋರಾಟದಲ್ಲಿ ಭಾರತದ ಕೊಡುಗೆ, ನಿರ್ವಹಿಸುತ್ತಿರುವ ಪ್ರಮುಖ ಪಾತ್ರ ಗಮನಾರ್ಹ. ಭಾರತದ ಸ್ವದೇಶಿ ಲಸಿಕೆ ಕೊವ್ಯಾಕ್ಸಿನ್ಗೆ ವಿಶ್ವ ಆರೋಗ್ಯ ಸಂಸ್ಥೆ ಇನ್ನೂ ಒಪ್ಪಿಗೆ ನೀಡಿಲ್ಲ. ಇದಕ್ಕೆ ಒಪ್ಪಿಗೆ ಸಿಕ್ಕರೆ ಭಾರತ ಇತರೆ ದೇಶಗಳಿಗೆ ನೆರವಾಗವುದಕ್ಕೆ ಸಾಧ್ಯವಿದೆ. ನವೆಂಬರ್ ಮೂರರಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಮಿತಿ ಸಭೆ ನಡೆಯಲಿದೆ. ಅಲ್ಲಿ ರಿಸ್ಕ್-ಬೆನಿಫಿಟ್ಗಳ ಅಂತಿಮ ಮೌಲ್ಯಮಾಪನ ನಡೆದ ಕೊವ್ಯಾಕ್ಸಿನ್ಗೆ ತುರ್ತು ಬಳಕೆಗೆ ಅನುಮತಿ ನೀಡಬಹುದೆಂಬ ನಿರೀಕ್ಷೆ ಇದೆ. ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಮತ್ತು ಆಸ್ಟ್ರಾ ಜೆನಿಕಾ, ಆಕ್ಸ್ಫರ್ಡ್ ಯೂನಿವರ್ಸಿಟಿಗಳ ಕೋವಿಶೀಲ್ಡ್ ಲಸಿಕೆಗಳನ್ನು ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿದೆ. ಇದು ಪರಿಣಾಮಕಾರಿ ಎಂಬುದು ಈಗಾಗಲೇ ಸಾಬೀತಾಗಿರುವ ಅಂಶ ಎಂದು ಮೋದಿ ಪ್ರತಿಪಾದಿಸಿದರು.
ಜಾಗತಿಕ ನಾಯಕರ ಜತೆ ಮಾತುಕತೆ
ಜಿ20 ಶೃಂಗದ ವಿರಾಮದ ವೇಳೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡ್ ಮತ್ತಿತರ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಸಿಂಗಾಪುರ ಪ್ರಧಾನಿ ಲೀ ಹ್ಸಿನ್ ಲೂಂಗ್ ಅವರೊಂದಿಗೆ ಕೂಡ ಪ್ರಧಾನಿ ಮೋದಿ ಅವರು ಫಲಪ್ರದವಾದ ದ್ವಿಪಯ ಮಾತುಕತೆ ನಡೆಸಿದರು ಎಂದು ಪಿಎಂಒ ಟ್ವೀಟ್ ಮಾಡಿದೆ.
ಶೃಂಗದ ಥೀಮ್
ಪೀಪಲ್, ಪ್ಲಾನೆಟ್ ಮತ್ತು ಪ್ರಾಸ್ಪೆರಿಟಿ (ಪಿಪಿಪಿ) ಎಂಬುದು ಈ ಸಲದ ಜಿ20 ಶೃಂಗದ ಥೀಮ್. ಜಾಗತಿಕ ಆರೋಗ್ಯ ವ್ಯವಸ್ಥೆ, ಮೂಲಸೌಕರ್ಯ ಬಲಪಡಿಸುವ ವಿಚಾರ, ಕರೊನಾ ಸೋಂಕಿನಿಂದ ಬಚಾವ್ ಆಗುವ ವಿಷಯಗಳ ಕಡೆಗೆ ಈ ಸಲ ಶೃಂಗ ಹೆಚ್ಚಿನ ಗಮನಹರಿಸುತ್ತಿದೆ.
ಪ್ರಮುಖ ವಿದ್ಯಮಾನಗಳು
1. ಇನ್ನು ನಾಲ್ಕು ವರ್ಷದಲ್ಲಿ ಕಾರ್ಬನ್ ಕಡಿಮೆ ಮಾಡುವ ಗುರಿ ತಲುಪಲು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮೇಲೆ ಒತ್ತಡ ಹೇರಿದರೂ ಅದರಿಂದ ಪ್ರಯೋಜವೇನೂ ಆಗಿಲ್ಲ ಎಂದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್.
2. ಜಗತ್ತಿನ ಬಡ ರಾಷ್ಟ್ರಗಳಿಗೆ 6.7 ಕೋಟಿ ಲಸಿಕೆ ಡೋಸ್ಗಳನ್ನು ್ರಾನ್ಸ್ ವಿತರಿಸಿದೆ. ವಿಶ್ವಸಂಸ್ಥೆ ಬೆಂಬಲಿತ ಕೊವಾಕ್ಸ್ ಅನ್ನು ಅತಿಹೆಚ್ಚು ವಿತರಿಸಿದ ಎರಡನೇ ರಾಷ್ಟ್ರ ಎಂಬ ಕೀರ್ತಿ ನಮ್ಮ ದೇಶಕ್ಕೆ ಎಂದ ಫ್ರಾನ್ಸ್ ವಿದೇಶಾಂಗ ಸಚಿವ ಜೀನ್-ಯೆವ್ಸ್ ಲೆ ಡ್ರಿಯಾನ್
3. ರೋಮ್ನಲ್ಲಿ ಜಿ20 ಶೃಂಗದ ಸ್ಥಳಕ್ಕೆ ಸಮೀಪದಲ್ಲಿ ಹವಾಮಾನ ವೈಪರೀತ್ಯ ತಡೆಗೆ ಸರ್ಕಾರಗಳು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ರಸ್ತೆ ತಡೆ ಪ್ರತಿಭಟನೆ ನಡೆಸಿದರು. ಪೊಲೀಸರು ಕೂಡಲೇ ಪ್ರತಿಭಟನಾಕಾರರನ್ನು ಅಲ್ಲಿಂದ ಚದುರಿಸಿದರು.
ಎಂಎನ್ಸಿಗಳಿಗೆ ಶೇಕಡ 15 ತೆರಿಗೆ ಖಾತ್ರಿ
ಬಹುರಾಷ್ಟ್ರೀಯ ಕಂಪನಿಗಳಿಗೆ ಜಾಗತಿಕ ಕನಿಷ್ಠ ತೆರಿಗೆ ವಿಧಿಸುವ ಯೋಜನೆ ಜಾರಿಗೆ ಒಲವು ವ್ಯಕ್ತವಾಗಿದೆ. ಭಾನುವಾರ ಇದು ಜಿ20 ಶೃಂಗದಲ್ಲಿ ಅಂಗೀಕಾರವಾಗುವ ನಿರೀಕ್ಷೆಯಲ್ಲಿದೆ ಅಮೆರಿಕ. ಜಿ20 ಶೃಂಗವು ಜಾಗತಿಕ ಆರ್ಥಿಕತೆ, ಕರೊನಾ ಸೋಂಕು ಮುಂತಾದ ಕಾರ್ಯ ಸೂಚಿ ಹೊಂದಿವೆಯಾದರೂ, ಜಾಗತಿಕ ಕನಿಷ್ಠ ತೆರಿಗೆ ಯೋಜನೆಗೆ ಅನುಮೋದನೆ ಪಡೆಯುವುದು ಮುಖ್ಯ ಉದ್ದೇಶವಾಗಿದೆ. ಬಹುರಾಷ್ಟ್ರೀಯ ಕಂಪನಿ (ಎಂಎನ್ಸಿ)ಗಳು ತೆರಿಗೆ ತಪ್ಪಿಸಿ ಕಡಿಮೆ ತೆರಿಗೆ ಇರುವ ರಾಷ್ಟ್ರಗಳಲ್ಲಿ ವಹಿವಾಟು ಮುಂದುವರಿಸುವುದನ್ನು ತಡೆಯುವ ಉದ್ದೇಶ ಹೊಂದಲಾಗಿದೆ.
ಪ್ರಧಾನಿ ಮೋದಿ-ಪೋಪ್ ಭೇಟಿ
ಪ್ರಧಾನಿ ಮೋದಿ ವ್ಯಾಟಿಕನ್ ಸಿಟಿಯಲ್ಲಿ ಶನಿವಾರ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. 2013ರಲ್ಲಿ ಪೋಪ್ ಅಧಿಕಾರ ಸ್ವೀಕರಿಸಿದ ನಂತರ ಅವರನ್ನು ಭಾರತದ ಪ್ರಧಾನಿ ಭೇಟಿ ಮಾಡಿದ್ದು ಇದೇ ಮೊದಲು. ಅಪೋಸ್ಟೋಲಿಕ್ ಪ್ಯಾಲೇಸ್ನಲ್ಲಿ ಪ್ರಧಾನಿ ಮೋದಿ ಮತ್ತು ಪೋಪ್ ಫ್ರಾನ್ಸಿಸ್ ನಡುವೆ 20 ನಿಮಿಷ ನಿಗದಿಯಾಗಿದ್ದ ಮಾತುಕತೆ ಒಂದು ಗಂಟೆಗೂ ಅಧಿಕ ಕಾಲ ಮುಂದುವರಿಯಿತು. 2000ನೇ ಇಸವಿ ಜೂನ್ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಅಂದಿನ ಪೋಪ್ ಎರಡನೇ ಜಾನ್ ಪಾಲ್ರನ್ನು ಭೇಟಿ ಮಾಡಿದ್ದರು. ವ್ಯಾಟಿಕನ್ನ ಕ್ಯಾಥೋಲಿಕ್ ಚರ್ಚ್ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರನ್ನು ಭಾರತಕ್ಕೆ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರಿಗೆ ಪ್ರಧಾನಿ ಮೋದಿ ಅವರು ವಿಶೇಷ ಬೆಳ್ಳಿಯ ಕ್ಯಾಂಡಲ್ ಹೋಲ್ಡರ್ ಮತ್ತು ಹವಾಮಾನ ವೈಪರೀತ್ಯ ತಡೆಗೆ ಭಾರತ ಕೈಗೊಂಡಿರುವ ಕ್ರಮಗಳ ವಿವರ ಇರುವ ಪುಸ್ತಕವನ್ನು ಕೊಡುಗೆಯಾಗಿ ನೀಡಿದರು. ಇದಕ್ಕೆ ಪ್ರತಿಯಾಗಿ ಪೋಪ್ ಫ್ರಾನ್ಸಿಸ್ ಕೂಡ ಕಂಚಿನ ಲಕವನ್ನು ಪ್ರಧಾನಿ ಮೋದಿಗೆ ಹಸ್ತಾಂತರಿಸಿದರು.