ಮಾಸ್ಕೋ/ನವದೆಹಲಿ : ರಷ್ಯಾದ ಸ್ಪುಟ್ನಿಕ್ ವಿ ಕರೊನಾ ಲಸಿಕೆಯ ಉತ್ಪಾದನೆಯನ್ನು ಆಗಸ್ಟ್ನಲ್ಲಿ ಭಾರತ ಆರಂಭಿಸಲಿದ್ದು, 850 ಮಿಲಿಯನ್ ಡೋಸ್ಗಳನ್ನು ಉತ್ಪಾದಿಸಲಿದೆ. ಇದರಿಂದ ಭಾರತದ ಲಸಿಕೆ ಅಗತ್ಯವನ್ನು ಪೂರೈಸುವುದಷ್ಟೇ ಅಲ್ಲ, ಜಗತ್ತಿನಲ್ಲಿ ಬಳಸಲಾಗುವ ಒಟ್ಟು ಸ್ಪುಟ್ನಿಕ್ ವಿ ಲಸಿಕೆಗಳಲ್ಲಿ ಶೇ.65 ರಿಂದ 70 ರಷ್ಟು ಮೇಡ್ ಇನ್ ಇಂಡಿಯಾ ಆಗಲಿವೆ ಎಂದು ರಷ್ಯಾಗೆ ಭಾರತದ ಎನ್ವಾಯ್ ಆಗಿರುವ ಅಂಬಾಸಿಡಾರ್ ಡಿ.ಬಿ. ವೆಂಕಟೇಶ್ ವರ್ಮ ಹೇಳಿದ್ದಾರೆ.
ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವರ್ಮ, ಈಗಾಗಲೇ ಭಾರತಕ್ಕೆ 1,50,000 ಡೋಸ್ ಮತ್ತು 60,000 ಡೋಸ್ ಸಿದ್ಧ ಲಸಿಕೆಗಳನ್ನು ಎರಡು ಕಂತುಗಳಲ್ಲಿ ರಷ್ಯಾ ಪೂರೈಸಿದೆ. ಮೇ ಅಂತ್ಯಕ್ಕೆ ಇನ್ನೂ 3 ಮಿಲಿಯನ್ ಡೋಸ್ಗಳನ್ನು ಬಲ್ಕ್ನಲ್ಲಿ ಪೂರೈಸಲಿದೆ ಎಂದರು. "ಇವನ್ನು ಭಾರತದಲ್ಲೇ ಫಿಲ್ ಮಾಡಲಾಗುವುದು. ಅದನ್ನು ಫಿಲ್ ಅಂಡ್ ಫಿನಿಶ್ ಎಂದು ಕರೆಯುತ್ತಾರೆ. ಜೂನ್ನಲ್ಲಿ ಈ ಸಂಖ್ಯೆಯು 5 ಮಿಲಿಯನ್ಗೆ ಏರಲಿದೆ. ಮತ್ತು ಆಗಸ್ಟ್ನಲ್ಲಿ ಭಾರತದಲ್ಲೇ ಉತ್ಪಾದನೆ ಆರಂಭವಾಗಲಿದೆ" ಎಂದಿದ್ದಾರೆ.
“ಸ್ಪುಟ್ನಿಕ್ ಲಸಿಕೆಯನ್ನು ಭಾರತದಲ್ಲಿ ಮೂರು ಹಂತಗಳಲ್ಲಿ ಒದಗಿಸಲಾಗುತ್ತಿದೆ. ಮೊದಲನೆಯದಾಗಿ, ರಷ್ಯಾದಿಂದ ಪೂರ್ಣ ಸಿದ್ಧವಾಗಿ ಪೂರೈಕೆ - ಅದು ಈಗಾಗಲೇ ಶುರುವಾಗಿದೆ. ಎರಡನೆಯದಾಗಿ ಆರ್ಡಿಐಎಫ್ಅನ್ನು ಬಲ್ಕ್ನಲ್ಲಿ ಭಾರತಕ್ಕೆ ಕಳುಹಿಸಲಾಗುವುದು. ಅದು ಬಳಕೆಗೆ ಸಿದ್ಧವಾಗಿರುತ್ತದೆ, ಆದರೆ, ಪ್ರತ್ಯೇಕ ಬಾಟಲಿಗಳಿಗೆ ಭಾರತದಲ್ಲಿ ತುಂಬಲಾಗುತ್ತದೆ. ಮೂರನೆಯದಾಗಿ ಇಲ್ಲೇ ಉತ್ಪಾದನೆಯಾಗುತ್ತದೆ” ಎಂದಿದ್ದಾರೆ.
"ಮತ್ತೊಂದು ಒಂದೇ ಡೋಸ್ ಲಸಿಕೆಯಾದ 'ಸ್ಪುಟ್ನಿಕ್ ಲೈಟ್'ಅನ್ನು ಒದಗಿಸಲೂ ರಷ್ಯಾ ಪ್ರಸ್ತಾವನೆ ನೀಡಿದೆ. ಭಾರತದಲ್ಲಿ ಅದಕ್ಕೆ ನಿಯಂತ್ರಕ ಅನುಮೋದನೆಗಳು ಇನ್ನೂ ಪೂರ್ಣವಾಗಿಲ್ಲ. ಕಾನೂನುರೀತ್ಯ ಅನುಮೋದನೆ ಸಿಕ್ಕ ಮೇಲೆ ಅದೂ ಕೂಡ ಭಾರತ ಮತ್ತು ರಷ್ಯಾದ ನಡುವಣ ಸಹಕಾರದ ಕ್ಷೇತ್ರವಾಗಲಿದೆ” ಎಂದು ವರ್ಮ ಹೇಳಿದ್ದಾರೆ. ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆಯನ್ನು ನಿರ್ವಹಿಸುತ್ತಿರುವ ಡಾ.ರೆಡ್ಡೀಸ್ ಲ್ಯಾಬರೇಟರೀಸ್ ಮೇ14 ರಂದು ಅದನ್ನು ಅಧಿಕೃತವಾಗಿ ಲಾಂಚ್ ಮಾಡಿದೆ. ಅದರ ಬೆಲೆಯು ಡೋಸ್ಗೆ 948 ರೂ. ಪ್ಲಸ್ ಜಿಎಸ್ಟಿ ಆಗಿರಲಿದೆ ಎನ್ನಲಾಗಿದೆ. (ಏಜೆನ್ಸೀಸ್)