ನ್ಯೂಸ್

ಭಾರತ ಸೌರ ಪ್ರಕಾಶಮಾನ

ಬಾಬುಪ್ರಸಾದ್​ ಮೋಡಿಸ್​

ನವದೆಹಲಿ: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿರುವ ಭಾರತ ಒಟ್ಟು 100 ಗಿಗಾ ವಾಟ್ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯ ವನ್ನು ಅಭಿವೃದ್ಧಿಪಡಿಸಿದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಈ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿದ್ದಾರೆ.

ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು ‘ಭಾರತವು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ. ಮಾದರಿಗಳು ಮತ್ತು ತಯಾರಕರ ಅನುಮೋದಿತ ಪಟ್ಟಿಯಡಿಯಲ್ಲಿ (ಎಎಲ್​ಎಂಎಂ) 100 ಗಿಗಾ ವಾಟ್ ಸೌರ ಮಾಡ್ಯೂಲ್ ಉತ್ಪಾದನಾ ಸಾಮರ್ಥ್ಯವನ್ನು ಪಡೆದಿದೆ.

2014 ರಲ್ಲಿ ಇದು 2.3 ಗಿಗಾವಾಟ್ ಇತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಹೆಚ್ಚಿನ ದಕ್ಷತೆಯ ಸೌರ ಮಾಡ್ಯೂಲ್​ಗಳಿಗಾಗಿ ಉತ್ಪಾದನಾ ಸಂಬಂಧಿತ ಪ್ರೋತ್ಸಾಹ (ಪಿಎಲ್​ಐ) ಯೋಜನೆ ಸೇರಿದಂತೆ ಪೂರಕ ಉಪಕ್ರಮಗಳಿಂದ ನಾವು ದೃಢವಾದ, ಸ್ವಾವಲಂಬಿ ಸೌರ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುತ್ತಿದ್ದೇವೆ. ಈ ಸಾಧನೆ ಆತ್ಮನಿರ್ಭರ ಭಾರತದ ಕಡೆಗೆ ನಮ್ಮ ಹೆಜ್ಜೆಯನ್ನು ಬಲಪಡಿಸುತ್ತದೆ ಮತ್ತು ಭಾರತ 2030ರ ವೇಳೆಗೆ 500 ಗಿಗಾ ವಾಟ್ ನವೀಕರಿಸ ಬಹುದಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಗುರಿ ತಲುಪಲಿದೆ’ ಎಂದು ತಿಳಿಸಿದ್ದಾರೆ.

ಜೋಶಿ ಮಾಡಿದ ಪೋಸ್ಟ್ ಅನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ ಇದು ಸ್ವಾವಲಂಬನೆಯತ್ತ ಮತ್ತೊಂದು ಮೈಲಿಗಲ್ಲು. ಇದು ಭಾರತದ ಉತ್ಪಾದನಾ ಸಾಮರ್ಥ್ಯಗಳ ಯಶಸ್ಸನ್ನು ಮತ್ತು ಶುದ್ಧ ಶಕ್ತಿಯನ್ನು ಜನಪ್ರಿಯಗೊಳಿಸುವ ನಮ್ಮ ಪ್ರಯತ್ನಗಳನ್ನು ಚಿತ್ರಿಸುತ್ತದೆ ಎಂದು ತಿಳಿಸಿದ್ದಾರೆ.