Nikki Haley: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ಬಗ್ಗೆ ಭಾರತ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಬೇಕು. ವೈಟ್ ಹೌಸ್‌ನೊಂದಿಗೆ ಬೇಗನೆ ಒಳ್ಳೆಯ ಪರಿಹಾರ ಕಂಡುಕೊಳ್ಳುವಂತೆ ವಿಶ್ವಸಂಸ್ಥೆಯ ಅಮೆರಿಕಾದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲಿ ಭಾನುವಾರ(ಆಗಸ್ಟ್ 24) ಹೇಳಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ನಿಕ್ಕಿ ಹ್ಯಾಲಿ, ಭಾರತವು ರಷ್ಯಾದ ತೈಲದ ಬಗ್ಗೆ ಟ್ರಂಪ್‌ರ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಮತ್ತು ವೈಟ್ ಹೌಸ್‌ನೊಂದಿಗೆ ಪರಿಹಾರ ಕಂಡುಕೊಳ್ಳಲು ಕೆಲಸ ಮಾಡಬೇಕು. ಬೇಗ ಕ್ರಮ ಕೈಗೊಂಡರೆ ಒಳ್ಳೆಯದು ಎಂದಿದ್ದಾರೆ.
ವಿಶ್ವದ ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ನಡುವಿನ ದಶಕಗಳ ಸ್ನೇಹ ಮತ್ತು ಸೌಹಾರ್ದವು ಪ್ರಸ್ತುತ ಗೊಂದಲವನ್ನು ಮೀರಿ ಮುನ್ನಡೆಯಲು ಗಟ್ಟಿಯಾದ ಆಧಾರವನ್ನು ಒದಗಿಸುತ್ತದೆ. ವ್ಯಾಪಾರ ಭಿನ್ನಾಭಿಪ್ರಾಯಗಳು ಮತ್ತು ರಷ್ಯಾದ ತೈಲ ಆಮದುಗಳಂತಹ ಸಮಸ್ಯೆಗಳನ್ನು ನಿಭಾಯಿಸಲು ಕಠಿಣ ಸಂವಾದದ ಅಗತ್ಯವಿದೆ. ಆದರೆ, ನಾವು ಅತ್ಯಂತ ಮುಖ್ಯವಾದುದನ್ನು ಕಳೆದುಕೊಳ್ಳಬಾರದು. ನಮ್ಮ ಸಾಮಾನ್ಯ ಗುರಿ ಚೀನಾವನ್ನು ಎದುರಿಸಲು, ಯುನೈಟೆಡ್ ಸ್ಟೇಟ್ಸ್‌ಗೆ ಭಾರತದ ಸ್ನೇಹ ಅಗತ್ಯವಿದೆ ಎಂದು ನಿಕ್ಕಿ ಹ್ಯಾಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ನ್ಯೂಸ್ ವೀಕ್ನಲ್ಲಿ ಲೇಖನ ಬರೆದಿದ್ದ ಅವರು, ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ಮುರಿಯುವ ಹಂತದಲ್ಲಿದೆ. ಚೀನಾವನ್ನು ಎದುರಿಸಲು ಅಮೆರಿಕಾ, ಭಾರತವನ್ನು ತನ್ನ ಪ್ರಜಾಪ್ರಭುತ್ವದ ಪಾಲುದಾರ ಎಂದು ಪರಿಗಣಿಸಬೇಕು. ಚೀನಾದಂತೆ ಅದನ್ನು ಎದುರಾಳಿಯಾಗಿ ಪರಿಗಣಿಸಬಾರದು. ಸುಂಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದರು.
ರಷ್ಯಾದಿಂದ ತೈಲ ಖರೀದಿಸಿದ್ದಕ್ಕಾಗಿ ಟ್ರಂಪ್, ಭಾರತದ ಮೇಲೆ ಎರಡೆರಡು ಸುಂಕಗಳನ್ನು ವಿಧಿಸಿದ್ದು, ಎರಡು ದೇಶಗಳ ನಡುವೆ ಸಂಬಂಧ ಹದಗೆಟ್ಟಿದೆ. ಭಾರತದ ರಪ್ತಿನ ಮೇಲೆ ಒಟ್ಟು 50ರಷ್ಟು ಸುಂಕ ವಿಧಿಸಲಾಗಿದ್ದು, ಇದೇ 27ರಿಂದ ಜಾರಿಯಾಗುತ್ತಿದೆ. ಜವಳಿ ಮತ್ತು ಸಮುದ್ರ ರಫ್ತುಗಳಂತಹ ಅನೇಕ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವ ಅನ್ಯಾಯಯುತ, ನ್ಯಾಯಸಮ್ಮತವಲ್ಲದ ಮತ್ತು ಅವಿವೇಕದ ಕ್ರಮವನ್ನು ಭಾರತ ಖಂಡಿಸಿದೆ.
ಭಾರತ ತನ್ನ ರೈತರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ತಿಳಿದಿದ್ದರೂ, ರೈತರಿಗಾಗಿ ಅದನ್ನು ಮಾಡಲು ಸಿದ್ಧರಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. (ಏಜೆನ್ಸೀಸ್)