ನವದೆಹಲಿ: ರಷ್ಯಾದಿಂದ ಕಚ್ಚಾ ತೈಲ(Crude Oil) ಖರೀದಿಯಿಂದಾಗಿ ಅಮೆರಿಕಾ ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ಹೇರಿದ್ದು ನಮ್ಮೆಲ್ಲರಿಗೂ ಗೊತ್ತಿದೆ. ಆದರೆ ಕಳೆದ ಅಕ್ಟೋಬರ್ ತಿಂಗಳಲ್ಲಿ ಭಾರತ ಅಮೆರಿಕಾದಿಂದ ಭಾರಿ ಪ್ರಮಾಣದಲ್ಲಿ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ ಎಂದು ಕೆಪ್ಲರ್ ಮಾಹಿತಿ ನೀಡಿದೆ.
ಪ್ರಮುಖ ದತ್ತಾಂಶ ಮತ್ತು ವಿಶ್ಲೇಷಣಾ ಸಂಸ್ಥೆಯಾದ ಕೆಪ್ಲರ್ ಮಾಹಿತಿ ಪ್ರಕಾರ, ಅಕ್ಟೋಬರ್ ಆರಂಭದಿಂದ ಅ. 27ರ ಹೊತ್ತಿಗೆ ಭಾರತವು ಅಮೆರಿಕಾದಿಂದ ಸರಾಸರಿ ದಿನ 5,75,000 ಬ್ಯಾರಲ್ ಕಚ್ಚಾತೈಲವನ್ನು ಆಮದು ಮಾಡಿಕೊಂಡಿದೆ. ಇದು 2022ರಿಂದ ಆಮದು ಮಾಡಿಕೊಳ್ಳುವ ಮಟ್ಟಕ್ಕಿಂತ ಅತ್ಯಧಿಕವಾಗಿದ್ದು, ನವೆಂಬರ್ ತಿಂಗಳಿನಲ್ಲಿಯೂ ಇದರ ವೇಗ ಮುಂದುವರೆಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ ಎಂದು ಹೇಳಿದೆ.
ಭಾರತ ದಿನಕ್ಕೆ 4 ಲಕ್ಷದಿಂದ 4.75 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಹಿಂದೆ ಅಮೆರಿಕಾದಿಂದ ದಿನಕ್ಕೆ ಸರಾಸರಿ 3 ಲಕ್ಷ ಬ್ಯಾರಲ್ಗಳಷ್ಟು ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಈ ಖರೀದಿ ಟ್ರಂಪ್ ಒತ್ತಡವಲ್ಲ, ಪ್ರಮುಖ ಆರ್ಥಿಕ ಪರಿಣಾಮದಿಂದ ಅಮೆರಿಕಾದಿಂದ ಆಮದು ಹೆಚ್ಚಾಗಿದೆ ಎನ್ನಲಾಗಿದೆ.
ಕೆಲವು ತಜ್ಞರ ಪ್ರಕಾರ, ಅಮೆರಿಕದ ಕಚ್ಚಾ ತೈಲದ ಬೆಲೆ, ಬ್ರೆಂಟ್ ಕಚ್ಚಾ ತೈಲಕ್ಕಿಂತ ಕಡಿಮೆಯಿರುವುದರಿಂದ ಮತ್ತು ಚೀನಾದಲ್ಲಿ ತೈಲ ಬೇಡಿಕೆ ಕಡಿಮೆಯಾಗಿರುವುದರಿಂದ ಭಾರತೀಯ ಸಂಸ್ಕರಣಾಗಾರಗಳು ಅಮೆರಿಕದಿಂದ ತಮ್ಮ ಕಚ್ಚಾ ತೈಲ ಆಮದುಗಳನ್ನು ಹೆಚ್ಚಿಸಿವೆ. ಆದರೆ ಇದರ ಜೊತೆಗೆ ರಷ್ಯಾದಿಂದ ಖರೀದಿಸುತ್ತಿರುವ ಕಚ್ಚಾ ತೈಲದಲ್ಲಿ ಸ್ವಲ್ಪವೂ ಕಡಿಮೆಯಾಗಿಲ್ಲ. ಸೆಪ್ಟೆಂಬರ್ಗೆ ಹೋಲಿಸಿದೆ ಅಕ್ಟೋಬರ್ನಲ್ಲೂ ರಷ್ಯಾದಿಂದ ಖರೀದಿಯಲ್ಲಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)